ಅಪ್ಪನ ಪ್ರೇರಣೆ, ಬೆಂಬಲದಿಂದ ಐಟಿಬಿಪಿಯಲ್ಲಿ ಕಮಾಂಡಂಟ್ ಆಗಿ ಸೇರಿದ ಮಗಳು ಇನ್ಸ್​ಪೆಕ್ಟರ್​-ತಂದೆಯಿಂದಲೇ ಸಲ್ಯೂಟ್ ಹಾಕಿಸಿಕೊಂಡಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 10, 2021 | 7:19 PM

ದೀಕ್ಷಾ ಐಟಿಬಿಪಿ ಯಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗಿರುವುದರಿಂದ ಆಗಸ್ಟ್ 8 ರಂದು ಉತ್ತರಾಖಂಡ್ ಮುಸ್ಸೋರಿನಲ್ಲಿನ ಅಕ್ಯಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ತಂದೆ ಕಮಲೇಶ್ ಅವರು ಮಗಳಿಗೆ ಸಲ್ಯೂಟ್ ಮಾಡಿದರು.

ಮಕ್ಕಳ ವಿಷಯದಲ್ಲಿ ಎಲ್ಲ ತಂದೆ ತಾಯಿಗಳ ಬದುಕಿನ ಉದ್ದೇಶ, ಗುರಿ ಒಂದೇ ಆಗಿರುತ್ತದೆ. ಅವರು ತಮಗಿಂತ ದೊಡ್ಡ ಹೆಸರು ಮಾಡಬೇಕು, ಮನೆತನದ ಗೌರವ ಹೆಚ್ಚಿಸಬೇಕು, ಆಪ್ತರು ಮತ್ತು ಬಂಧುಗಳ ಸರ್ಕಲ್ನಲ್ಲಿ ತಮ್ಮ ಮಕ್ಕಳ ಬಗ್ಗೆಯೇ ಜಾಸ್ತಿ ಮಾತಾಡಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಕುಟುಂಬಗಳನ್ನು ನಾವು ನೋಡುತ್ತಿರುತ್ತೇವೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು, ವೈದ್ಯರ ಮಕ್ಕಳು ವೈದ್ಯರು, ಐಎಎಸ್ ಅಧಿಕಾರಿಗಳ ಮಕ್ಕಳು ಸಹ ಉನ್ನತ ಅಧಿಕಾರಿಗಳಾಗುತ್ತಾರೆ. ಮಕ್ಕಳು ತಮ್ಮಂತೆ ಅಥವಾ ತಮ್ಮನ್ನು ಮೀರಿಸಿ ಉನ್ನತ ಸ್ಥಾನ ಗಿಟ್ಟಿಸಿದರೆ ಅಪ್ಪ-ಅಮ್ಮಂದಿರಿಗೆ ಅದು ವಿಶಿಷ್ಟ ಅನುಭೂತಿ, ಬದುಕು ಸಾರ್ಥಕಗೊಂಡ ಧನ್ಯತಾ ಭಾವ. ಇದಕ್ಕೆ ತದ್ವಿರುದ್ಧವಾದ ಉದಾಹರಣಗಳನ್ನು ಸಹ ನಾವು ನೋಡುತ್ತಿರುತ್ತೇವೆ, ಅದು ಬೇರೆ ವಿಷಯ.

ಇಲ್ಲೊಂದು ತಂದೆ ಮಗಳ ಜೋಡಿಯಿದೆ. ಇದು ನಿಜಕ್ಕೂ ಅಪರೂಪದ ಜೋಡಿ. ತಂದೆ ಕಮಲೇಶ್ ಕುಮಾರ್ ಹಲವಾರು ವರ್ಷಗಳಿಂದ ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಲ್ಲಿ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಗಳು ದೀಕ್ಷಾ ಮೊನ್ನೆಯಷ್ಟೇ ಯುಪಿಎಸ್ಸಿ ಪರೀಕ್ಷೆ ಬರೆದು ಐಟಿಬಿಪಿಗೆ ಆಯ್ಕೆಯಾಗಿರುವ ಕೇವಲ ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ. ಆ ಎರಡನೇ ಮಹಿಳೆಯೂ ದೀಕ್ಷಾ ಅವರೊಂದಿಗೆಯೇ ಆಯ್ಕೆಯಾಗಿರೋದು. ದೀಕ್ಷಾ ಐಟಿಬಿಪಿ ಯಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗಿರುವುದರಿಂದ ಆಗಸ್ಟ್ 8 ರಂದು ಉತ್ತರಾಖಂಡ್ ಮುಸ್ಸೋರಿನಲ್ಲಿನ ಅಕ್ಯಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ತಂದೆ ಕಮಲೇಶ್ ಅವರು ಮಗಳಿಗೆ ಸಲ್ಯೂಟ್ ಮಾಡಿದರು.

ಈ ಹೃದಯಸ್ಪರ್ಶಿ ಚಿತ್ರವನ್ನು ಐಟಿಬಿಪಿ ತನ್ನ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ ನಂತರ ನೆಟ್ಟಿಗರು ತಂದೆ-ಮಗಳ ಜೋಡಿಯನ್ನು ಮನಸಾರೆ ಹೊಗಳಿದ್ದೇ ಹೊಗಳಿದ್ದು.

ಜನ ತಂದೆ-ಮಗಳ ಜೋಡಿಯನ್ನು ಮೆಚ್ಚಿ ಮಾಡಿರುವ ಟ್ವೀಟ್​ಗಳು

ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ದೀಕ್ಷಾ, ‘ನನ್ನ ತಂದೆಯ ಬೆಂಬಲದಿಂದ ನಾನು ಈ ಹಂತ ತಲುಪಿದ್ದೇನೆ. ನನ್ನ ರೋಲ್ ಮಾಡೆಲ್ ಅವರೇ. ಪ್ರತಿದಿನ ಅವರು ನನ್ನಲ್ಲಿ ಸ್ಫೂರ್ತಿ ತುಂಬಿದ್ದಾರೆ,’ ಎಂದು ಹೇಳಿದರು.

ಇದನ್ನೂ ಓದಿ:  ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಜೀಪ್​ ಎದುರೇ ಎರಡು ಹುಲಿಗಳ ಕಾದಾಟ; ವಿಡಿಯೋ ಇದೆ