‘ರೀ ಯಾವನ್ರೀ ಅವನು ಡಿವೈಎಸ್ಪಿ, ಕರೀರಿ ಅವ್ನನ್ನ ಇಲ್ಲಿ’ ಎಂದು ಆರ್ಭಟಿಸಿದರು ಜೆಡಿ(ಎಸ್) ಶಾಸಕ ಹೆಚ್ ಡಿ ರೇವಣ್ಣ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2022 | 11:00 PM

ಆದರೂ ಹಾಸನದ ಪೊಲೀಸ್ ವ್ಯವಸ್ಥೆಯ ಮೇಲಧಿಕಾರಿಗಳು ರೇಣುಕಾಪ್ರಸಾದರನ್ನು ಕಡ್ಡಾಯ ರಜೆ ಮೇಲೆ ಕಳಿಸುತ್ತಾರೆ. ಅದಾದ ಮೇಲೆ ರೇವಣ್ಣ ಡಿಐಜಿ ಅವರನ್ನು ಸ್ಥಳಕ್ಕೆ ಕರೆಸಿ ಫರ್ಮಾನು ಹೊರಡಿಸುತ್ತಾರೆ! ಒಂದು ಪೋಸ್ಟ್​ಮಾರ್ಟೆಮ್ ಮಾಡಿಸಲು ಐಜಿ ಸ್ತರದ ಅಧಿಕಾರಿ ಬರಬೇಕೇ?

ಹಾಸನ: ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳ ಸಮಯ ಜೆಡಿ(ಎಸ್) ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಮನವೊಲಿಸುವುದರಲ್ಲೇ ವ್ಯಯವಾಯಿತು ಮಾರಾಯ್ರೇ. ಯಾಕೆ ಅಂತ ನಾವು ಮೂರ್ನಾಲ್ಕು ವಿಡಿಯೋಗಳಲ್ಲಿ ವಿವರಿಸಿದ್ದೇವೆ. ಬುಧವಾರ ಕೊಲೆಯಾದ ಹಾಸನ ನಗರ ಸಭೆ ಸದಸ್ಯನ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಲು ಮಾಜಿ ಸಚಿವರು ಒಂದಾದ ಮೇಲೊಂದು ಷರತ್ತುಗಳನ್ನು ಇಡುತ್ತಾ ಹೋದರು. ಮೊದಲಿಗೆ ಅವರು ಹೇಳಿದ್ದು ಸಿಪಿಐ ರೇಣುಕಾಪ್ರಸಾದ (CPI Renukaprasad) ಅವರನ್ನು ಸಸ್ಪೆಂಡ್ ಮಾಡಿ ಅಂತ ಹೇಳಿದರು.

ಅವರು ಹೇಳುತ್ತಿದ್ದಾರೆ ಅಂತತ ಸಿಪಿಐರನ್ನು ಸಸ್ಪೆಂಡ್ ಮಾಡಲಾಗದು ಮಾರಾಯ್ರೇ. ಅವರಿಂದ ಕರ್ತವ್ಯಲೋಪವಾಗಿದ್ದರೆ, ನಿರ್ಲಕ್ಷ್ಯವಹಿಸಿದ್ದರೆ, ಅದು ಇಲಾಖಾ ತನಿಖೆಯ (departmental inquiry) ಬಳಿಕ ಗೊತ್ತಾಗುತ್ತದೆ ಮತ್ತು ತನಿಖೆಯಿಂದ ಹೊರಬಂದ ಅಂಶಗಳ ಆಧಾರದ ಮೇಲೆ ಗೃಹ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ.

ಆದರೂ ಹಾಸನದ ಪೊಲೀಸ್ ವ್ಯವಸ್ಥೆಯ ಮೇಲಧಿಕಾರಿಗಳು ರೇಣುಕಾಪ್ರಸಾದರನ್ನು ಕಡ್ಡಾಯ ರಜೆ ಮೇಲೆ ಕಳಿಸುತ್ತಾರೆ. ಅದಾದ ಮೇಲೆ ರೇವಣ್ಣ ಡಿಐಜಿ ಅವರನ್ನು ಸ್ಥಳಕ್ಕೆ ಕರೆಸಿ ಫರ್ಮಾನು ಹೊರಡಿಸುತ್ತಾರೆ! ಒಂದು ಪೋಸ್ಟ್​ಮಾರ್ಟೆಮ್ ಮಾಡಿಸಲು ಐಜಿ ಸ್ತರದ ಅಧಿಕಾರಿ ಬರಬೇಕೇ?

ಅವರು ಬರಲಾರರು ಅಂತ ಗೊತ್ತಾದ ಬಳಿಕ ರೇವಣ್ಣ ಅವರು ಡಿವೈಎಸ್ಪಿ ಉದಯಭಾಸ್ಕರ್ ಅವರನ್ನು ಕರೆಸಿ ಅಂತ ಹೊಸ ವರಾತ ಶುರುವಿಟ್ಟುಕೊಳ್ಳುತ್ತಾರೆ. ಸ್ಥಳದಲ್ಲಿರುವ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಗೆ ಅವರು, ‘ಮೇಡಂ, ಈ ಉದಯಬಾಸ್ಕರ್ ಅದಾಗಲೇ ಕೇಸ್ ಕ್ಲೋಸ್ ಮಾಡಿದ್ದಾರೆ,’ ಅಂತ ಹೇಳಿ, ‘ರೀ ಯಾವನ್ರೀ ಅವನು ಡಿವೈಎಸ್ಪಿ, ಕರೆಸ್ರೀ ಅವನನ್ನ ಇಲ್ಲಿ!’ ಅನ್ನುತ್ತಾರೆ.

ಸರ್ಕಾರೀ ಅಧಿಕಾರಿಗಳನ್ನು ಹೀಗೆ ಅವಹೇಳನಕಾರಿಯಾಗಿ ಸಂಬೋಧಿಸುವುದು ಎಷ್ಟು ಸರಿ ಅಂತ ರೇವಣ್ಣನವರೇ ನಮಗೆ ಹೇಳಬೇಕು. ಶಾಸಕರು, ಸಚಿವರು, ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಭಾವೀ ಧುರೀಣರು ಸರ್ಕಾರೀ ನೌಕರರನ್ನು ತಮ್ಮ ನೌಕರರೆಂದು ಭಾವಿಸುವುದು ನಮ್ಮ ದೇಶದಲ್ಲಿ ಯಾವಾಗ ನಿಲ್ಲುತ್ತೋ?

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.