ಅಮಾಯಕರನ್ನು ಕೊಂದ ಉಗ್ರರ ಷಂಡತನದ ನಡುವೆ ಕಾಬೂಲ್ ಜನರ ಹೃದಯ ವೈಶಾಲ್ಯತೆ ಕಂಬನಿ ಮಿಡಿಯುವಂತೆ ಮಾಡುತ್ತದೆ!

ಅಮಾಯಕರನ್ನು ಕೊಂದ ಉಗ್ರರ ಷಂಡತನದ ನಡುವೆ ಕಾಬೂಲ್ ಜನರ ಹೃದಯ ವೈಶಾಲ್ಯತೆ ಕಂಬನಿ ಮಿಡಿಯುವಂತೆ ಮಾಡುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2021 | 10:16 PM

ಕಾಬೂಲ್ ನಗರವಾಸಿಗಳು ಕಳೆದೆರಡು ವಾರಗಳಿಂದ ತಾವು ಅನುಭವಿಸುತ್ತಿರುವ ಆತಂಕ ಮತ್ತು ಭೀತಿಯ ನಡುವೆಯೂ, ಮೊನ್ನೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರುತ್ತಾ ತಮ್ಮ ಮನೆಗಳ ಮಾಳಿಗೆ ಮೇಲೆ ದೀಪಗಳನ್ನು ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು.

ಕಾಬೂಲ್ ನಗರ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜಮಾಯಿಸಿದ್ದ ಮುಗ್ಧ ಜನರನ್ನು ಕೊಂದು ಹೇಡಿತನ ಮೆರೆದ ಐಸಿಸ್-ಕೆ ಉಗ್ರಗಾಮಿಗಳು ಅದೆಷ್ಟೋ ಮಹಿಳೆಯರನ್ನು ವಿಧವೆಗಳಾಗಿ, ಮಕ್ಕಳನ್ನು ಅನಾಥರನ್ನಾಗಿ ಮಾಡಿದರು. ಹಾಗೆಯೇ, ತಾಲಿಬಾನಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬೇರೆ ಯಾವುದಾದರೂ ದೇಶದಲ್ಲಿ ನೆಮ್ಮದಿಯ ಬದುಕು ಆರಂಭಿಸಬೇಕು ಅಂದುಕೊಂಡಿದ್ದ ಹಲವಾರು ಪುರುಷರನ್ನು ಕೊಂದು ಷಂಡತನ ಮೆರೆದರು. ಈ ಕೃತ್ಯಕ್ಕಾಗಿ ಒಬ್ಬನನ್ನು ಆತ್ಮಾಹುತಿ ಮಾಡಿಕೊಳ್ಳಲು ಜಿಹಾದ್ ಹೆಸರಿನಲ್ಲಿ ಪುಸಲಾಯಿಸಲಾಗಿತ್ತು. ಅವನಿಗೆ ಯಾವೆಲ್ಲ ಆಮಿಷಗಳನ್ನು ಒಡ್ಡಲಾಗಿತ್ತೋ? ಒಂದು ಪಕ್ಷ ಕುಟುಂಬದ ಸದಸ್ಯರು ಉಪಜೀವನಕ್ಕಾಗಿ ಅವನ ಮೇಲೆಯೇ ಅವಲಂಬಿತರಾಗಿದ್ದರೆ ಅವರ ಗತಿಯೇನು? ಅಮಾಯಕರನ್ನು ಕೊಂದ ಅವನಂತೂ ನರಕಕ್ಕೆ ಹೋದ, ಅವನ ಬ್ರೇನ್ ವಾಷ್ ಮಾಡಿದ ಉಗ್ರರು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ನೂರಾರು ಜೀವಗಳ ಬೆಲೆ ಅರಿಯದವರು ಒಬ್ಬ ಮೂರ್ಖನ ಜೀವದ ಬಗ್ಗೆ ಯೋಚಿಸುತ್ತಾರೆಯೇ?

ಇಂಥ ನರಹಂತಕ ಪಾಪಿಗಳನ್ನು ದೇವರು ಕ್ಷಮಿಸುತ್ತಾನೆಯೇ? ಅಂತ ಅಫಘಾನಿಸ್ತಾನದ ಜನ ಶಪಿಸುತ್ತಿದ್ದಾರೆ.
ಆದರೆ, ಕಾಬೂಲ್ ನಗರದ ನಿವಾಸಿಗಳ ಹೃದಯ ವೈಶಾಲ್ಯವನ್ನು ನೋಡಿರಿ. ಐಸಿಸ್ ಉಗ್ರರ ದಾಳಿಯಲ್ಲಿ ಮಡಿದವರು ಇವರಲ್ಲಿ ಎಷ್ಟು ಜನರಿಗೆ ಸಂಬಂಧಿಕರೋ? ಸತ್ತವರಲ್ಲಿ ವಿದೇಶಿಯರೂ ಸೇರಿದ್ದಾರೆ. ಕಾಬೂಲ್ ನಗರವಾಸಿಗಳು ಕಳೆದೆರಡು ವಾರಗಳಿಂದ ತಾವು ಅನುಭವಿಸುತ್ತಿರುವ ಆತಂಕ ಮತ್ತು ಭೀತಿಯ ನಡುವೆಯೂ, ಮೊನ್ನೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರುತ್ತಾ ತಮ್ಮ ಮನೆಗಳ ಮಾಳಿಗೆ ಮೇಲೆ ದೀಪಗಳನ್ನು ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು.

ದೇವರಿಗೆ ಬೇಕಾಗಿರುವವರು ಇವರು ಮತ್ತು ಇವರ ಪ್ರಾರ್ಥನೆಗಳನ್ನು ಮಾತ್ರ ಆತ ಕೇಳಿ ಆಶೀರ್ವದಿಸುತ್ತಾನೆ.

ಎಲ್ಲ ಧರ್ಮಗಳಲ್ಲಿ ನರಹತ್ಯೆ ಪಾಪವೆಂದೇ ಹೇಳಲಾಗಿದೆ. ಇಷ್ಟು ಸರಳವಾದ ವಿಚಾರ ಈ ಮೂರ್ಖರಿಗೆ ಅದ್ಯಾಕೆ ಅರ್ಥವಾಗುವುದಿಲ್ಲವೋ?

ಇದನ್ನೂ ಓದಿ:  ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ