ಚಿತ್ತಾಪುರದಲ್ಲಿ ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು

Edited By:

Updated on: Jul 09, 2025 | 4:19 PM

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿಯಲ್ಲಿ ನಡೆದ ಸಿಸಿ ರಸ್ತೆ ಕಾಮಗಾರಿ ಬಿಲ್ ಪಾವತಿಗೆ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಜೂನಿಯರ್ ಇಂಜಿನಿಯರ್ 5% ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಗುತ್ತಿಗೆದಾರರೊಂದಿಗಿನ ಈ ವ್ಯವಹಾರದ ವಿಡಿಯೋದಲ್ಲಿ ಪಿಡಿಒ ಕೂಡ 3% ಲಂಚಕ್ಕೆ ಬೇಡಿಕೆ ಇಟ್ಟಿರುವುದು ಕಂಡುಬಂದಿದೆ. ಈ ಘಟನೆ ಲಂಚದ ಪ್ರಮಾಣವನ್ನು ಎತ್ತಿ ತೋರಿಸುತ್ತದೆ.

ಕಲಬುರಗಿ, ಜುಲೈ 09: ಸಿಸಿ ರಸ್ತೆ ಕಾಮಗಾರಿ ಬಿಲ್ ಮಾಡಲು ಕಲಬುರಗಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ (PER)ದ ಜೂನಿಯರ್ ಇಂಜಿನಿಯರ್​ 5 ಪರ್ಸೆಂಟ್​ ಲಂಚ ಬೇಡಿರುವ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಕಾಮಗಾರಿ ಬಿಲ್​ ಮಾಡಲು 5 ಪರ್ಸೆಂಟ್ ಲಂಚ ಕೇಳಿದ್ದಾರೆ. ಪಿಡಿಓ 3 ಪರ್ಸೆಂಟ್ ಕೇಳುತ್ತಾರೆ, ಅವರಿಗೂ ಕೊಡಬೇಕು ಎಂದು ಗುತ್ತಿಗೆದಾರರ ಜೊತೆ ನಡೆದ ಹಣಕಾಸು ವ್ಯಾವಹಾರದ ವಿಡಿಯೋ ನೋಡಿ.

ಲಂಚಕ್ಕೆ ಬೇಡಿಕೆ ಇಟ್ಟ ಜೆಇ ಶ್ರೀಪಾದ್ ಕುಲಕರ್ಣಿ ಮತ್ತು ಪಿಡಿಒ ಮಂಜುಶ್ರೀ ಅವರನ್ನು ಅಮಾನತು ಮಾಡಿ ಕಲಬುರಗಿ ಜಿ.ಪಂ. ಸಿಇಒ ಭಂವರ್​ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ.

ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಂದಿದೆ. ಮಾಧ್ಯಮಗಳಲ್ಲೂ ಈ ಸುದ್ದಿ ಗಮನಿಸಿದ್ದೇನೆ. ಜೆಇ ಮತ್ತು ಪಿಡಿಓ ಇಬ್ಬರನ್ನೂ‌ ಅಮಾನತು ಮಾಡಿದ್ದೇವೆ. ನಮ್ಮದೇ ಇಲಾಖೆಯಲ್ಲಿ, ನಮ್ಮ‌ ಕ್ಷೇತ್ರದಲ್ಲಿ ಈ‌ ರೀತಿ ನಡೆಯುವುದು ಸರಿಯಲ್ಲ.  ದೂರು ಕೊಟ್ಟರೆ ಸ್ಪೆಷಲ್ ಅಡಿಟ್ ಸಹ ಮಾಡುತ್ತೇವೆ ಎಂದು ಹೇಳಿದರು.

Published on: Jul 09, 2025 02:34 PM