ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!

Edited By:

Updated on: Jul 03, 2026 | 9:47 AM

ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸರ ಘೋರ ನಿರ್ಲಕ್ಷ್ಯದಿಂದಾಗಿ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಮಧ್ಯರಾತ್ರಿ ಕೈಕೋಳ ಬಿಚ್ಚಿ, ಠಾಣೆಯಿಂದಲೇ ಪರಾರಿಯಾಗಿದ್ದಾನೆ. ಇಡೀ ಠಾಣೆಯ ಸಿಬ್ಬಂದಿ ನಿದ್ರೆಗೆ ಜಾರಿದ್ದನ್ನು ಗಮನಿಸಿ ಆರೋಪಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರಿಗೆ ತೀವ್ರ ಮುಜುಗರ ಉಂಟುಮಾಡಿದೆ.

ಕಲಬುರಗಿ, ಜುಲೈ 3: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಪೊಲೀಸರ ಘೋರ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಗೆ ಬಂಧಿಸಿ ಕರೆತರಲಾಗಿದ್ದ ಪೋಕ್ಸೋ (POCSO) ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಎಂಬಾತ ಗುರುವಾರ ಮಧ್ಯರಾತ್ರಿ ಅತ್ಯಂತ ಚಾಣಾಕ್ಷತನದಿಂದ ಪರಾರಿಯಾಗಿದ್ದಾನೆ. ಠಾಣೆಯಲ್ಲಿದ್ದ ಸಿಬ್ಬಂದಿ ಗಡದ್ದಾಗಿ ಮಲಗಿರುವುದನ್ನು ಕಂಡ ಆರೋಪಿ, ತನಗೆ ಹಾಕಲಾಗಿದ್ದ ಕೈಕೋಳವನ್ನು ಬಿಚ್ಚಿಕೊಂಡು ಠಾಣೆಯ ಎರಡನೇ ಮಹಡಿಯಿಂದ ಪಕ್ಕದಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದು ಜಿಗಿದು ಎಸ್ಕೇಪ್ ಆಗಿದ್ದಾನೆ.

ಸುಮಾರು ಒಂದು ವಾರದ ಹಿಂದೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಠಾಣೆಗೆ ಕರೆತಂದು ಇರಿಸಿದ್ದರು. ಆದರೆ, ಪೊಲೀಸರ ಮೈಮರೆವಿನ ಲಾಭ ಪಡೆದ ಆರೋಪಿ ನಸುಕಿನ ಜಾವ ಪರಾರಿಯಾಗಿದ್ದಾನೆ.

ಆರೋಪಿ ಮಂಜುನಾಥ್ ಠಾಣೆಯಿಂದ ಅತ್ಯಂತ ನಿರಾಳವಾಗಿ ಓಡಿ ಹೋಗುತ್ತಿರುವ ಸಂಪೂರ್ಣ ದೃಶ್ಯಗಳು ಪೊಲೀಸ್ ಠಾಣೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗೃಹ ಸಚಿವರ ತವರಿನಲ್ಲೇ ನಡೆದಿರುವ ಈ ಘಟನೆ ಸದ್ಯ ಇಡೀ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಸದ್ಯ ಎಚ್ಚೆತ್ತುಕೊಂಡಿರುವ ಹಿರಿಯ ಅಧಿಕಾರಿಗಳು ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗಗಳು ಸೇರಿದಂತೆ ವಿವಿಧೆಡೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಯ ವಿರುದ್ಧವೂ ಕಠಿಣ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More