ರೌಡಿಗಳ ಮಟ್ಟಹಾಕಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್: IPS ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಸ್ಕ್ವಾಡ್, ಎನ್‌ಎಸ್‌ಜಿ ಟ್ರೈನಿಂಗ್ ರಚನೆ
ಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಭದ್ರತಾ ವ್ಯವಸ್ಥೆ ಬಲಪಡಿಸಲು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಎತ್ತರದ ಕಟ್ಟಡಗಳಲ್ಲಿ ರಕ್ಷಣೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಎನ್‌ಎಸ್‌ಜಿ ತರಬೇತಿ ಹಾಗೂ ಶೇ. 50ರಷ್ಟು ಹೆಚ್ಚುವರಿ ಮೂಲ ವೇತನ ನೀಡಲಾಗುವುದು. ಜೊತೆಗೆ, ರೌಡಿಗಳೊಂದಿಗೆ ಸ್ಥಳೀಯ ಪೊಲೀಸರ ಸಂಪರ್ಕ ಕಡಿತಗೊಳಿಸಲು ಪ್ರತ್ಯೇಕ ರೌಡಿ ಸ್ಕ್ವಾಡ್ ರಚನೆ, ಮಿಲಿಟರಿ ಸಹಭಾಗಿತ್ವ ಮತ್ತು ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕಡ್ಡಾಯ ಪಾಲನೆಗೆ ಒತ್ತು ನೀಡಲಾಗಿದೆ.
ಬೆಂಗಳೂರು, ಆ.28: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನ ಎತ್ತರದ ಕಟ್ಟಡಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸ್ಥಳೀಯ ಪೊಲೀಸರಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಅಪಾಯಕಾರಿ ಕಾರ್ಯವನ್ನು ನಿರ್ವಹಿಸುವ ಸಿಬ್ಬಂದಿಗೆ ಶೇ. 50ರಷ್ಟು ಹೆಚ್ಚುವರಿ ಮೂಲ ವೇತನ ನೀಡುವುದಾಗಿ ಘೋಷಿಸಿದ್ದಾರೆ. ಗೃಹ ಸಚಿವರು ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಹಣದ ಬಗ್ಗೆ ಯೋಚಿಸದೆ ಇಂತಹವರಿಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಭಯೋತ್ಪಾದಕ ದಾಳಿಗಳು ಅಥವಾ ಇತರ ಯಾವುದೇ ಬಿಕ್ಕಟ್ಟು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಈ ಕ್ರಮ ಅತ್ಯಗತ್ಯ. ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿದ್ದು, ಜಗತ್ತಿನ ಗಮನ ಸೆಳೆದಿದೆ, ಆದ್ದರಿಂದ ನಾಗರಿಕರು ಭಯಮುಕ್ತರಾಗಿರುವುದು ಸರ್ಕಾರದ ಕರ್ತವ್ಯ ಎಂದರು. ಇದರ ಜೊತೆಗೆ, ರಾಜ್ಯಾದ್ಯಾಂತ, ವಿಶೇಷವಾಗಿ ಬೆಂಗಳೂರು ನಗರದಲ್ಲಿ, ರೌಡಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರತ್ಯೇಕ ರೌಡಿ ಸ್ಕ್ವಾಡ್ ರಚಿಸಲಾಗುವುದು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ರೌಡಿಗಳನ್ನು ದೂರವಿಡಲು ಸಮರ್ಥ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಈ ಸ್ಕ್ವಾಡ್ ಕಾರ್ಯನಿರ್ವಹಿಸಲಿದೆ. ಕಟ್ಟಡಗಳಲ್ಲಿ ಅಗ್ನಿಶಾಮಕ ಉಪಕರಣಗಳು ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಡಿಜಿಪಿ ಮತ್ತು ಪೊಲೀಸ್ ಕಮಿಷನರ್‌ಗೆ ಸೂಚಿಸಲಾಗಿದೆ. ಅಲ್ಲದೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯೊಂದಿಗೆ ತುರ್ತು ಸಂದರ್ಭಗಳಲ್ಲಿ ಹೆಲಿಕಾಪ್ಟರ್‌ಗಳ ಲಭ್ಯತೆಗಾಗಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
