ಬೆಂಗಳೂರಿನ ಹೊರೆ ಇಳಿಸಲು ಬಜೆಟ್ನಲ್ಲಿ ದೊಡ್ಡ ಘೋಷಣೆ: ರಾಜ್ಯದ 2ನೇ ಐಟಿ ಸಿಟಿಯಾಗಲಿದೆ ಮೈಸೂರು
ಬೆಂಗಳೂರಿನ ಹೊರೆಯನ್ನು ಕಡಿಮೆ ಮಾಡಲು ಹಾಗೂ ರಾಜ್ಯದಾದ್ಯಂತ ತಂತ್ರಜ್ಞಾನ ವಲಯದ ವಿಸ್ತರಣೆಗೆ ಕರ್ನಾಟಕ ಬಜೆಟ್ 2026 ರಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ನವೋದ್ಯಮಗಳನ್ನು ಉತ್ತೇಜಿಸಲು, ಮೈಸೂರನ್ನು ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು, AI, ರೋಬೋಟಿಕ್ಸ್, ಸೆಮಿಕಂಡಕ್ಟರ್ ಮತ್ತು GCC ಕ್ಷೇತ್ರಗಳಿಗಾಗಿ 1000 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.
ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಕರ್ನಾಟಕ ಬಜೆಟ್ 2026 ರಲ್ಲಿ ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಇತರ ನಗರಗಳಲ್ಲಿ ತಂತ್ರಜ್ಞಾನ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಬೆಂಗಳೂರು ಹೊರತುಪಡಿಸಿ, ಇತರೆ ನಗರಗಳಲ್ಲಿ 1000 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ, ಮೈಸೂರನ್ನು 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು ಸಹ ಪ್ರಮುಖವಾದದ್ದಾಗಿದೆ.
ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಂತಹ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕಿಯೋನಿಕ್ಸ್ ಮೂಲಕ ಇನ್‌ಕ್ಯುಬೇಷನ್ ಸೌಲಭ್ಯಗಳು ಮತ್ತು ಕ್ಲೀನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿ ESDM ಮತ್ತು ಸೆಮಿಕಂಡಕ್ಟರ್ ವಲಯಕ್ಕೆ ಬೃಹತ್ ಕಂಪನಿಗಳಿಂದ 45,000 ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಐಐಎಸ್ಸಿ, ಇಸ್ರೋ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕ್ಯಾಂಪಸ್, ಮತ್ತು ರಾಯಚೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುವುದು. 2029 ರ ವೇಳೆಗೆ 500 ಹೊಸ ಜಿಸಿಸಿಗಳನ್ನು ಸ್ಥಾಪಿಸಿ 3.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
