ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!

Edited By:

Updated on: Jul 23, 2026 | 3:09 PM

ಧಾರವಾಡದಲ್ಲಿ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಕಟಾವು ಮತ್ತು ಸಾಗಣೆ ವೆಚ್ಚ ಭರಿಸಲಾಗದೆ, ಗೋವನಕೊಪ್ಪ ಗ್ರಾಮದ ರೈತರೊಬ್ಬರು ಮೂರು ಎಕರೆ ಮೆಣಸಿನಕಾಯಿ ಬೆಳೆಯನ್ನೇ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ. ಇತ್ತ ಬೀದರ್ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಸೋಯಾಬೀನ್ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿದ್ದು, ರೈತರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಧಾರವಾಡ, ಬೀದರ್, ಜುಲೈ 23: ಕರ್ನಾಟಕದ ರೈತರು ಪ್ರಸ್ತುತ ಎರಡೆರಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಳೆಯ ಕೊರತೆಯಿಂದ ಬೆಳೆ ಒಣಗಿ ಹೋಗುತ್ತಿದೆ. ಧಾರವಾಡ ಜಿಲ್ಲೆಯ ಗೋವನಕೊಪ್ಪ ಗ್ರಾಮದ ರೈತರೊಬ್ಬರು ಮೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ದರ ಕುಸಿತದಿಂದಾಗಿ ನಾಶಪಡಿಸಿದ್ದಾರೆ. ಪ್ರತಿ ಕೆಜಿ ಮೆಣಸಿನಕಾಯಿಗೆ ಕೇವಲ 6 ರೂಪಾಯಿ ದರ ಕೇಳುತ್ತಿದ್ದರಿಂದ, ಕಟಾವು ಮತ್ತು ಸಾಗಣೆಗೆ ತಗಲುವ ವೆಚ್ಚವನ್ನೂ ಭರಿಸಲು ಸಾಧ್ಯವಾಗದೆ ರೈತರು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಒಳಗಾಗಿದ್ದಾರೆ. 10 ಕೆಜಿಗೆ ಕನಿಷ್ಠ 300 ರೂಪಾಯಿ ದೊರೆತರೆ ಮಾತ್ರ ಲಾಭ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮತ್ತೊಂದೆಡೆ, ಬೀದರ್ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗದೆ, ರೈತರು ಬಿತ್ತಿದ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದ ಸೋಯಾಬೀನ್ ಬೆಳೆ ಕೈಕೊಡುತ್ತಿದೆ. ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ, ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಎರಡೂ ಸನ್ನಿವೇಶಗಳು ರಾಜ್ಯದ ರೈತರ ದಯನೀಯ ಸ್ಥಿತಿಯನ್ನು ಬಹಿರಂಗಪಡಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 23, 2026 12:58 PM
Loading...
Unable to load recommendations.
Follow Us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More