ಎಸಿಬಿಗೆ ಚಾಟಿ -ಮುಂದೇನು? ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ TV 9 Kannada Digital Live

ಹಿಂದಿನ ವಿಚಾರಣೆ ವೇಳೆ ಎಸಿಬಿ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರು, ಎಸಿಬಿಯೇ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಎಸಿಬಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಎಸಿಬಿ ವಿರುದ್ಧ ಗುಡುಗಿದ್ದರು.

TV9kannada Web Team

| Edited By: sadhu srinath

Jul 07, 2022 | 3:34 PM

ನ್ಯಾಯಮೂರ್ತಿ ಎಚ್​.ಪಿ. ಸಂದೇಶ್​ ಎಸಿಬಿ ಮೇಲೆ ಚಾಟಿ ಬೀಸುತ್ತಿದ್ದಂತೆ ನ್ಯಾಯಮೂರ್ತಿಯನ್ನೇ ಎತ್ತಂಗಡಿ ಮಾಡಿಸುವ ವಿಚಾರ ತೇಲಿ ಬಂದಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪಿಸಿರುವ ನ್ಯಾಯಮೂರ್ತಿ ಎಚ್‌.ಪಿ ಸಂದೇಶ್ ಅವರು, ಎಸಿಬಿ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕೆ ತನ್ನನ್ನೇ ವರ್ಗಾವಣೆ ಮಾಡಿಸುವ ಬೆದರಿಕೆ ಬಂದಿದೆ. ಇಂತಹ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ನಾನು ರೈತನ ಮಗ, ಜಡ್ಜ್ ಹುದ್ದೆ ಹೋದರೆ ಉಳುಮೆ ಮಾಡಲೂ ಸಿದ್ಧನಿದ್ದೇನೆ. ಆದರೆ, ಭ್ರಷ್ಟಾಚಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದ್ದಾರ, ವಿಟಮಿನ್ ಎಂ ಸಿಕ್ಕರೆ ಎಲ್ಲರಲ್ಲೂ ರಕ್ಷಿಸುತ್ತಾರೆ ಎಂದು ಎಸಿಬಿ ಭ್ರಷ್ಟಾಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು ಎಸಿಬಿ ಪರ ವಕೀಲರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಕಳಂಕಿತರನ್ನು ರಕ್ಷಿಸುತ್ತಿದ್ದೀರಾ ಅಥವಾ ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ. ಕರಿ ಕೋಟು ಇರುವುದು ಆರೋಪಿಗಳನ್ನು ರಕ್ಷಿಸಲಿಕ್ಕೆ ಅಲ್ಲ, ಭಷ್ಮಾಚಾರ ಕ್ಯಾನ್ಸರ್ ಆಗಿದೆ. ನಾಲ್ಕನೇ ಹಂತಕ್ಕೆ ಹೋಗಲು ಬಿಡಬಾರದು. ಎಸಿಬಿ ಅಧಿಕಾರಿಗಳು ಸರ್ಚ್ ವಾರಂಟ್ ತೋರಿಸಿ ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಮಾಡುವುದೇನು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ನಿಮ್ಮ ಎಸಿಬಿ ಎಡಿಜಿಪಿ ಬಹಳ ಪ್ರಭಾವಿಯಂತೆ. ಅವರ ಸರ್ವಿಸ್ ರೆಕಾರ್ಡ್ ಈವರೆಗೆ ಹಾಜರುಪಡಿಸಿಲ್ಲ. ವ್ಯಕ್ತಿಯೊಬ್ಬರು ನನ್ನ ಸಹ ನ್ಯಾಯಮೂರ್ತಿ ಬಳಿ ವರ್ಗಾವಣೆ ಮಾಡಿಸುವ ಕುರಿತು ಹೇಳಿದ್ದಾರಂತೆ. ಇದನ್ನು ನನ್ನ ಸಹ ನ್ಯಾಯಮೂರ್ತಿ ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ ನನಗೆ ಯಾವ ಹೆದರಿಕೆ ಇಲ್ಲ. ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ ಒಂದಿಂಚೂ ಆಸ್ತಿ ಮಾಡಿಲ್ಲ. ಯಾವುದೇ ರಾಜಕೀಯ ಪಕ್ಷ, ಸಿದ್ಧಾಂತದ ಹಂಗು ನನಗಿಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ರೈತನ ಮಗನಾಗಿರುವ ನಾನು ಜಡ್ಜ್ ಹುದ್ದೆ ಹೋದರೆ ಉಳುಮೆ ಮಾಡುತ್ತೇನೆ. ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ನ್ಯಾಯಮೂರ್ತಿಗಳು ವರ್ಗಾವಣೆ ಬೆದರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಹಿಂದಿನ ವಿಚಾರಣೆ ವೇಳೆ ಎಸಿಬಿ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರು, ಎಸಿಬಿಯೇ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಎಸಿಬಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಎಸಿಬಿ ವಿರುದ್ಧ ಗುಡುಗಿದ್ದರು.

ಎಸಿಬಿ ಕಾರ್ಯವೈಖರಿ, ನ್ಯಾಯಮೂರ್ತಿಯವರಿಗೆ ಬಂದ ಬೆದರಿಕೆ ಬಗ್ಗೆ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚಿಸೋಣ. ಮಧ್ಯಾಹ್ನ 3.30 ಕ್ಕೆ ಆ್ಯಂಕರ್​ ಹರಿಪ್ರಸಾದ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ

Follow us on

Click on your DTH Provider to Add TV9 Kannada