ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದ ಇವರು ಗುಜರಿ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೇಳಿದಾಗ ಪಶ್ಚಿಮ ಬಂಗಾಳ, ಬಿಹಾರದಿಂದ ಬಂದವರು ಎನ್ನುತ್ತಿದ್ದರು. ಬಂಧಿತರ ಬಳಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೇರಿ ಹಲವು ನಕಲಿ ದಾಖಲೆಗಳೂ ಇದ್ದವು.
ಬೆಂಗಳೂರು, ಜನವರಿ 12: ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ. 35 ವರ್ಷದ ಜಹಿದುಲ್ ಇಸ್ಲಾಂ ಮತ್ತು 32 ವರ್ಷದ ಫಿರ್ದೋಸ್ ಬಂಧಿತರು. ಈ ಇಬ್ಬರು ಸುಮಾರು ಎರಡು ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ. ಹುಲಿಮಂಗಲದ ಪೋಡು ಬಳಿಯ ಗುಜರಿ ಶೆಡ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಪ್ರಶ್ನಿಸಿದಾಗ, ತಾವು ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬಂದವರು ಎಂದು ಸುಳ್ಳು ಹೇಳಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು, ಇವರ ಬಳಿಯಿದ್ದ ನಕಲಿ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
