ಉಡುಪಿಯಲ್ಲಿ ಪ್ರವಾಹ; ಹೆಗಲ ಮೇಲೆ ಹೊತ್ತು ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

|

Updated on: Jul 08, 2024 | 7:47 PM

Udupi Rain Updates: ಉಡುಪಿಯಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಉಡುಪಿ ಜಿಲ್ಲೆಯ ಹಲವು ರಸ್ತೆಗಳು ಜಲಾವೃತವಾಗಿ, ಪ್ರವಾಹ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಣಾ ಪಡೆಯ ಸಿಬ್ಬಂದಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಉಡುಪಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಉಡುಪಿಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಉಡುಪಿಯ ಗುಂಡಿಬೈಲು ಪ್ರದೇಶ ಪ್ರವಾಹದ ನೀರಿನಿಂದ ಆವೃತವಾಗಿದ್ದು, ಇಲ್ಲಿ ಸಿಲುಕಿದ್ದ ಜನರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ತರಲಾಯಿತು. ಈ ನಡುವೆ ರಕ್ಷಣಾ ಪಡೆಯ ಸಿಬ್ಬಂದಿ ಉಡುಪಿಯಲ್ಲಿ ಮಳೆ ನೀರಿನಿಂದ ಸುತ್ತುವರೆದಿದ್ದ ಮನೆಯಲ್ಲಿ ಸಿಲುಕಿದ್ದ ನಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತವಾಗಿ ದಡಕ್ಕೆ ತಂದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಉಡುಪಿಯ ತಗ್ಗು ಪ್ರದೇಶದ ಹೊಲಗಳಿಗೆ ಮಳೆ ನೀರು ತುಂಬಿ ಮನೆಗಳೂ ಜಲಾವೃತವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಚರಂಡಿ, ನದಿ ಹಾಗೂ ರಸ್ತೆ ಒಂದೇ ರೀತಿ ಕಾಣುತ್ತಿದೆ. ಗುಂಡಿಬೈಲ್‌ನಲ್ಲಿ ಕೃತಕ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ಮನೆಗಳಲ್ಲಿ ಸಿಲುಕಿಕೊಂಡಿದ್ದ ಹಲವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾಪಾಡಿದ್ದಾರೆ. ಇಂದು ಬೆಳಗ್ಗೆ ಗುಂಡಿಬೈಲ್‌ನ ಬಾಲಕಿಯರ ಪಿಜಿ ಒಳಗೆ ಮಳೆ ನೀರು ನುಗ್ಗಿದ್ದರಿಂದ ಕೂಡಲೇ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಕೆಲ ನಿವಾಸಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on