IND vs WI: ಬೀಳಬಾರದ ಜಾಗಕ್ಕೆ ಬಿದ್ದ ಘಾತುಕ ವೇಗದ ಚೆಂಡು, ನೋವಿನಿಂದ ಕಿರುಚಿ ಒದ್ದಾಡಿದ ರಾಹುಲ್; ವಿಡಿಯೋ
KL Rahul injury: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ವೇಗಿಯ ಘಾತುಕ ಎಸೆತದಿಂದ ರಾಹುಲ್‌ಗೆ ತೊಡೆಸಂದಿಯ ಭಾಗಕ್ಕೆ ಬಲವಾದ ಪೆಟ್ಟು ಬಿತ್ತು. ನೋವಿನಿಂದ ನರಳಿದರೂ, ವೈದ್ಯಕೀಯ ಚಿಕಿತ್ಸೆ ಪಡೆದು ರಾಹುಲ್ ಬ್ಯಾಟಿಂಗ್ ಮುಂದುವರೆಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಅದ್ಭುತ ಶತಕ ಬಾರಿಸಿದ್ದ ರಾಹುಲ್, ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಇನ್ನಿಂಗ್ಸ್ ನೀಡಲು ವಿಫಲರಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿರುವ ರಾಹುಲ್, ವಿಂಡೀಸ್ ವೇಗಿ ಎಸೆದ ಘಾತುಕ ವೇಗದ ಎಸೆತದಿಂದಾಗಿ ನೋವಿನಿಂದ ನರಳಬೇಕಾಯಿತು. ರಬಸವಾಗಿ ಬಂದು ಬಡಿದ ಚೆಂಡಿನಿಂದ ನೋವಿಗೆ ತುತ್ತಾದ ರಾಹುಲ್, ನೋವು ತಡೆಯಲು ಸಾಧ್ಯವಾಗದೆ ಕಿರುಚಿ, ಒದ್ದಾಡಿದರು. ಇದರಿಂದ ಆಟವನ್ನು ಸ್ವಲ್ಪ ಸಮಯ ನಿಲ್ಲಿಸಬೇಕಾಯಿತು.
ವಿಂಡೀಸ್ ನೀಡಿದ 121 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಕಳಪೆ ಆರಂಭ ಸಿಕ್ಕಿತು. ಎರಡನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಔಟಾದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಸುದರ್ಶನ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಆದರೆ ಭಾರತದ ಇನ್ನಿಂಗ್ಸ್ನ ಮೂರನೇ ಓವರ್ ಬೌಲಿಂಗ್ ಮಾಡಿದ ವೇಗದ ಬೌಲರ್ ಜೇಡನ್ ಸೀಲ್ಸ್ ಅವರ ಎಸೆತದಲ್ಲಿ ರಾಹುಲ್ ಸರಿಯಾದ ಪೆಟ್ಟು ತಿಂದರು. ಸೀಲ್ಸ್ ಎಸೆದ ಓವರ್ನ ಮೂರನೇ ಎಸೆತವನ್ನು ರಾಹುಲ್ ರಕ್ಷಿಸಲು ಪ್ರಯತ್ನಿಸಿದರು, ಆದರೆ ಚೆಂಡು ಪಿಚ್ ಆಗಿ ಒಳಗೆ ಬಂದು ರಾಹುಲ್ ಅವರ ಬ್ಯಾಟ್ ಅನ್ನು ದಾಟಿ ನೇರವಾಗಿ ಅವರ ತೊಡೆಸಂದಿಗೆ ಬಡಿಯಿತು. ರಾಹುಲ್ ಗ್ರೋಯಿನ್ ಗಾರ್ಡ್ ಧರಿಸಿದ್ದರೂ ಸಹ ಚೆಂಡು ರಬಸವಾಗಿ ಬಡಿದ ಕಾರಣ, ರಾಹುಲ್‌ಗೆ ಭಾರಿ ನೋವಾಯಿತು. ಇದರಿಂದ ರಾಹುಲ್ ತಕ್ಷಣವೇ ತಮ್ಮ ಬ್ಯಾಟ್ ಅನ್ನು ಬೀಸಾಡಿ, ನೋವಿನಿಂದ ಒದ್ದಾಡುತ್ತಾ ಕ್ರೀಸ್‌ನಿಂದ ದೂರ ಕುಳಿತರು.
ನಂತರ, ಟೀಂ ಇಂಡಿಯಾದ ಫಿಸಿಯೋ ತಕ್ಷಣವೇ ಮೈದಾನಕ್ಕೆ ಧಾವಿಸಿದರು. ಇದರಿಂದ ಆಟವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ಅದೃಷ್ಟವಶಾತ್ ರಾಹುಲ್ ಅವರ ಗಾಯ ಗಂಭೀರವಾಗಿರಲಿಲ್ಲ. ಸ್ವಲ್ಪ ಹೊತ್ತು ಸುದಾರಿಸಿಕೊಂಡ ರಾಹುಲ್ ಮತ್ತೆ ಬ್ಯಾಟಿಂಗ್ ಮಾಡುವುದನ್ನು ಮುಂದುವರೆಸಿದರು. ಇದರ ನಂತರ ರಾಹುಲ್, ಸಾಯಿ ಸುದರ್ಶನ್ ಅವರೊಂದಿಗೆ ಇನ್ನಿಂಗ್ಸ್ ಮುಂದುವರಿಸಿ ಅಜೇಯ ಅರ್ಧಶತಕದ ಜೊತೆಯಾಟ ಕೂಡ ನಡೆಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

