ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?

Edited By:

Updated on: May 18, 2026 | 10:33 PM

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ ಆನೆಗಳ ಕಾದಾಟಕ್ಕೆ ಬಲಿಯಾಗಿದ್ದಾರೆ. ಮದವೇರಿದ ಆನೆಗಳ ಕಾಳಗದ ವೇಳೆ ಆನೆಯೊಂದು ದಂಪತಿಗಳ ಮೇಲೆ ಬಿದ್ದಾಗ ತುಳಸಿ ಗಂಭೀರ ಗಾಯಗೊಂಡರು. ಈ ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕೊಡಗು, ಮೇ 18: ದುಬಾರೆ ಆನೆ ಶಿಬಿರದಲ್ಲಿರುವ ಸಾಕಾನೆಗಳನ್ನ ನೋಡಲು ರಾಜ್ಯಮಾತ್ರವಲ್ಲ, ತಮಿಳುನಾಡು, ಕೇರಳದಿಂದಲೂ ಪ್ರವಾಸಿಗರು ಬರುತ್ತಾರೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಂದು ಆನೆಗಳ ಕಾಳಗಕ್ಕೆ ಬಲಿ ಆಗಿದ್ದಾರೆ. ಚೆನ್ನೈ ಮೂಲದ ಜೋಯೆಲ್ ತನ್ನ ಪತ್ನಿ ತುಳಸಿ ಹಾಗೂ ಮೂರು ವರ್ಷದ ಮಗಳ ಜೊತೆ ಇಂದು ಬೆಳಗ್ಗೆ ದುಬಾರೆ ಶಿಬಿರಕ್ಕೆ ಬಂದಿದ್ದಾರೆ. ಈ ವೇಳೆ ಮಾರ್ತಾಂಡ ಆನೆ ಜತೆ ನಿಂತಿದ್ದ ದಂಪತಿ ಫೋಟೋ ತೆಗೆಸಿಕೊಳ್ತಿದ್ರು. ಆಗ ಮದವೇರಿದ ಕಂಜನ್ ಆನೆ ಅಲ್ಲಿಗೆ ಬಂದಿದೆ. ನೋಡ ನೋಡ್ತಿದ್ದಂತೆ ಮಾರ್ತಾಂಡ ಆನೆ ಮೇಲೆ ಕಂಜನ್‌ ದಾಳಿ ಮಾಡಿದೆ. ಏಕಾಏಕಿ ದಾಳಿ ಆಗ್ತಿದ್ದಂತೆ ಮಾರ್ತಾಂಡ ಆನೆ ದಂಪತಿ ಮೇಲೆ ಬಿದ್ದಿದೆ. ತಕ್ಷಣ ಪುತ್ರಿಯನ್ನ ಒಂದು ಕೈಯಲ್ಲಿ ಎತ್ತಿ ನೀರಿನಿಂದ ಮೇಲೆದ್ದ ಜೋಯೆಲ್‌, ಬಳಿಕ ಪತ್ನಿಯನ್ನ ಉಳಿಸಿಕೊಳ್ಳಲು ಯತ್ನಿಸಿದರು. ಆದರೆ ಸಾಧ್ಯವಾಗಿಲ್ಲ. ಅದಾಗಲೇ ಆನೆ ಕೆಳಗೆ ಬಿದ್ದಿದ್ದ ತುಳಸಿ ಮೃತಪಟ್ಟಿದ್ದರು. ಈ ದುರಂತದ ಬಳಿಕ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸಿಗರನ್ನು ಆನೆಗಳ ಹತ್ತಿರ ಬಿಡುವ ಅಪಾಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮೃತರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಅರಣ್ಯ ಸಚಿವರು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು, ಇನ್ನು ಮುಂದೆ ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರದಲ್ಲಿ ನಿಂತು ವೀಕ್ಷಿಸಬೇಕು ಎಂದು ಆದೇಶಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Gopal AS