ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್? ಎನ್​ಐಎ ತನಿಖೆಗೆ ಆಗ್ರಹಿಸಿದ ಅಶೋಕ್

Updated on: Dec 31, 2025 | 2:14 PM

ಕೋಗಿಲು ಲೇಔಟ್ ಮನೆಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಎನ್ಐಎ ತನಿಖೆಗೆ ಆಗ್ರಹಿಸಿದ್ದಾರೆ. ತೆರವುಗೊಂಡ ಪ್ರದೇಶಗಳಲ್ಲಿ ಪಾಕಿಸ್ತಾನದ ನಂಟಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ರಾಜ್ಯ ಸರ್ಕಾರ ಕೇರಳದ ರಾಜಕೀಯಕ್ಕೆ ಬಲಿಯಾಗಿದೆ ಎಂದು ಟೀಕಿಸಿದ್ದಾರೆ. ಸಂತ್ರಸ್ತ ಕನ್ನಡಿಗರಿಗೆ ಪರಿಹಾರ ನೀಡದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಶೆಡ್, ಮನೆಗಳಲ್ಲಿದ್ದವರ ಪೌರತ್ವ ಮತ್ತು ಮೂಲದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಕೋಗಿಲು ಬಡಾವಣೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅಶೋಕ್, ಇಲ್ಲಿ ಮನೆಗಳ ತೆರವು ಮಾಡಿದ ಕೂಡಲೇ ಪಾಕಿಸ್ತಾನದ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಬೇಗ ಅಲ್ಲಿಗೆ ಹೇಗೆ ಮಾಹಿತಿ ಹೋಯಿತು? ಇಲ್ಲಿದ್ದ ಸ್ಲೀಪರ್​ ಸೆಲ್​​ನಿಂದ ಹೋಗಿರಬಹುದಲ್ಲವೇ? ಈ ಅನುಮಾನದ ಬಗ್ಗೆ ಎನ್​ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಕೇರಳದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇದಿಕೆ ಹಂಚಿಕೊಂಡಿರುವುದನ್ನು ಅಶೋಕ್ ಖಂಡಿಸಿದ್ದಾರೆ. ಕೇರಳ ಸರ್ಕಾರ ಕರ್ನಾಟಕವನ್ನು ಬುಲ್ಡೋಜರ್ ರಾಜ್ಯ ಎಂದು ಕರೆದಿದ್ದರೂ, ಸಿಎಂ ವೇದಿಕೆ ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ. ಅತಿಕ್ರಮಣ ತೆರವುಗೊಳಿಸಿದ ಕನ್ನಡಿಗರಿಗೆ ಪರಿಹಾರ ನೀಡುವ ಬದಲು, ಸರ್ಕಾರವು ಬಾಂಗ್ಲಾದೇಶ ಮೂಲದವರು ಎಂದು ಆರೋಪಿಸಲಾದವರಿಗೆ ಆಶ್ರಯ ನೀಡಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ. ನಿಜವಾದ ಕನ್ನಡಿಗರು, ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಇನ್ನೂ ನೆರವು ನೀಡಿಲ್ಲ. ಅಕ್ರಮ ಬಾಂಗ್ಲಾ ವಲಸಿಗರಿಗೆ ನೀಡಲು ಮುಂದಾಗಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ