ಕೋಲಾರ ಹಾಲು ಒಕ್ಕೂಟದ ಸಾಧನೆ: 70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
ಕೋಲಾರ ಹಾಲು ಒಕ್ಕೂಟವು 70 ಕೋಟಿ ರೂಪಾಯಿ ವೆಚ್ಚದಲ್ಲಿ 12 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಘಟಕವನ್ನು ನಿರ್ಮಿಸುವ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ. ಕಳೆದ 10 ತಿಂಗಳಲ್ಲಿ 10.5 ಕೋಟಿ ರೂಪಾಯಿ ಉಳಿತಾಯ ಮಾಡಿದ್ದು, ಪ್ರತಿ ತಿಂಗಳು 1 ರಿಂದ 1.5 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಆದಾಯ ಗಳಿಸಿ, ರೈತಪರ ಯೋಜನೆಗಳಿಗೆ ಅನುಕೂಲವಾಗಲಿದೆ.
ಕೋಲಾರ, ನ.6: ಜಿಲ್ಲೆಯ ಹಾಲು ಒಕ್ಕೂಟವು ದೇಶದಲ್ಲೇ ಮಾದರಿಯಾದ ಯೋಜನೆಯೊಂದನ್ನು ಅನುಷ್ಠಾನಗೊಳಿಸುವ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ. 70 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಬಳಿ ನಿರ್ಮಿಸಲಾಗಿರುವ 12 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ವೈ. ನಂಜೇಗೌಡರ ನೇತೃತ್ವದಲ್ಲಿ ಜಾರಿಗೆ ತಂದ ಈ ಯೋಜನೆಯು ಕಳೆದ 10 ತಿಂಗಳಿಂದ ಪರೀಕ್ಷಾರ್ಥ ಕಾರ್ಯದಲ್ಲಿದ್ದು, ಈಗಾಗಲೇ ಬರೋಬ್ಬರಿ 10.5 ಕೋಟಿ ರೂಪಾಯಿ ಉಳಿತಾಯ ಮಾಡಿದೆ. ಪ್ರತಿ ತಿಂಗಳು ಒಕ್ಕೂಟಕ್ಕೆ 1 ರಿಂದ 1.5 ಕೋಟಿ ರೂಪಾಯಿಗಳಷ್ಟು ಹಣ ಉಳಿತಾಯವಾಗುತ್ತಿದ್ದು, ಈ ಮೊದಲು ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತಿದ್ದ ಲಕ್ಷಾಂತರ ರೂಪಾಯಿಗಳ ಹೊರೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದೆ. ಒಕ್ಕೂಟದ ಸ್ವಂತ ಬಳಕೆಗೆ ಬೇಕಾದ ವಿದ್ಯುತ್ ಅನ್ನು ಪೂರೈಸುವುದರ ಜೊತೆಗೆ, ಹೆಚ್ಚುವರಿ ವಿದ್ಯುತ್ ಅನ್ನು ಜಿಲ್ಲೆಯ ಬಲ್ಕ್ ಮಿಲ್ಕ್ ಸೆಂಟರ್‌ಗಳಿಗೆ (ಬಿಎಂಸಿ) ಪೂರೈಸಲಾಗುತ್ತಿದೆ. ಉಳಿದ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಒಕ್ಕೂಟವು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಿದೆ. ಈ ಯೋಜನೆಯು ಹಾಲು ಒಕ್ಕೂಟಕ್ಕೆ ಆರ್ಥಿಕ ಶಕ್ತಿ ನೀಡಿದ್ದು, ಮುಂದಿನ ದಿನಗಳಲ್ಲಿ ರೈತಪರ ಯೋಜನೆಗಳನ್ನು ಜಾರಿಗೊಳಿಸಲು ಸಹಕಾರಿಯಾಗಲಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
