ಬಿಲ್ಗಳು ಬಿಡುಗಡೆಯಾಗದಿದ್ದರೆ ಸಂತೋಷ್ ಪಾಟೀಲ್ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಕೊಪ್ಪಳ ಗುತ್ತಿಗೆದಾರರು
ಹಾಗಾಗೇ, 6 ನೇ ತಾರೀಖು ನಾವು ಕುಟುಂಬಗಳ ಜೊತೆ ಕೈಯಲ್ಲಿ ವಿಷ ತುಂಬಿದ ಶೀಷೆ ಹಿಡಿದುಕೊಂಡೇ ಪ್ರತಿಭಟನೆಗೆ ಕೂರುತ್ತೇವೆ. ಬಿಲ್ ರಿಲೀಸ್ ಆಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳೋದು ನಿಶ್ಚಿತ ಅಂತ ಅವರು ಹೇಳುತ್ತಾರೆ.
Koppal: ರಾಜ್ಯದ ಎಲ್ಲ ಗುತ್ತಿಗೆದಾರರ ಕಥೆ ಒಂದೇ ಅನಿಸುತ್ತದೆ ಮಾರಾಯ್ರೇ. ನಮಗೆ ಕೊಪ್ಪಳ ತಾಲ್ಲೂಕು ಪಂಚಾಯಿತಿ ಸಭಾಭವನದಿಂದ (T P Auditorium) ಈ ವಿಡಿಯೋ ಲಭ್ಯವಾಗಿದೆ. ಸುಮಾರು 15-20 ಗುತ್ತಿಗೆದಾರರು (contractors) ಪಂಚಾಯಿತಿ ಅಧಿಕಾರಿಗಳ ಮುಂದೆ ತಮ್ಮ ವೇದನೆ ಹೇಳಿಕೊಳ್ಳುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ (Project Director) ಕೃಷ್ಣಮೂರ್ತಿ ಅವರ ಎದುರು ಗುತ್ತಿಗೆದಾರರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಸಲಿಗೆ ವಿಷಯವೇನೆಂದರೆ, ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ 4 ವರ್ಷ ಕಳೆದರೂ ಅವರ ಬಿಲ್ ಗಳನ್ನು ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರು ಬಿಲ್ ರಿಲೀಸ್ ಮಾಡಿ ಅಂತ ಹೇಳುತ್ತಿದ್ದರೂ ಅಧಿಕಾರಿಗಳು ಕೇವಲ ತಲೆ ಅಲ್ಲಾಡಿಸುತ್ತಿದ್ದಾರೆ. ಇಲ್ಲಿ ಕಾಣುತ್ತಿರುವ ಗುತ್ತಿಗೆದಾರರು ಬೇರೆ ಬೇರೆ ಇಲಾಖೆಗಳಿಗೆ ಸಾಲ ಸೋಲ ಮಾಡಿ ದುಡ್ಡು ಹಾಕಿ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. 4 ವರ್ಷಗಳಿಂದ ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟುತ್ತಾ ಬಿಲ್ ರಿಲೀಸ್ ಆಗುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಾ ಕೂತಿದ್ದಾರೆ.
ಸಭಾಭವನದಿಂದ ಹೊರಬದ ಬಳಿಕ ಕಚೇರಿ ಮುಂದೆ ಕೂತು ಒಂದು ಚಿಕ್ಕ ಪ್ರತಿಭಟನೆ ನಡೆಸಿದ್ದಾರೆ. ಸ್ಟೀಲ್, ಸಿಮೆಂಟ್ ಮತ್ತು ಇನ್ನಿತರ ಸಾಮಗ್ರಿಗಳನ್ನು ಸರಬರಾಜು ಮಾಡಿರುವ ವ್ಯಕ್ತಿಯೊಬ್ಬರು ಗುತ್ತಿಗೆದಾರರ ಪರ ಮಾತಾಡಿದ್ದಾರೆ. 2019ರಲ್ಲೇ ತಾವು ಸಾಮಗ್ರಿಗಳನ್ನು ಪೂರೈಸಿದ್ದರೂ ಇದುವರೆಗೆ ಹಣ ಮಂಜೂರಾಗಿಲ್ಲ, ಕೇಳಿದಾಗೆಲ್ಲ ಅಧಿಕಾರಿಗಳು ಒಂದಿಲ್ಲೊಂದು ನೆಪ ಹೇಳುತ್ತಾರೆ ಎಂದು ಅವರು ಹೇಳುತ್ತಾರೆ.
ಬಿಲ್ ಗಳನ್ನು ಕ್ಲೀಯರ್ ಮಾಡುವ ಭರವಸೆ ಯನ್ನು ನೀಡದಿದ್ದರೆ, ಮುಂದಿನ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿಗೆ ಕೂರುತ್ತೇವೆ. ನಮ್ಮಲ್ಲೊಬ್ಬರು ಸಂತೋಷ ಪಾಟೀಲ ಹಾಗೆ ಆತ್ಮಹತ್ಯೆ ಮಾಡಿಕೊಂಡ ಬಳಿಕವೇ ಬಿಲ್ ಗಳು ರಿಲೀಸ್ ಮಾಡಬಹುದು ಅಂತ ನಮಗೆ ಭಾಸವಾಗುತ್ತಿದೆ. ಹಾಗಾಗೇ, 6 ನೇ ತಾರೀಖು ನಾವು ಕುಟುಂಬಗಳ ಜೊತೆ ಕೈಯಲ್ಲಿ ವಿಷ ತುಂಬಿದ ಶೀಷೆ ಹಿಡಿದುಕೊಂಡೇ ಪ್ರತಿಭಟನೆಗೆ ಕೂರುತ್ತೇವೆ. ಬಿಲ್ ರಿಲೀಸ್ ಆಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳೋದು ನಿಶ್ಚಿತ ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP