ಕೆಪಿಎಸ್ಸಿ ನೇಮಕಾತಿ ಹಗರಣ: ಇಡಿಯಿಂದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಮಧ್ಯವರ್ತಿ ಕನ್ನಾಳೆ ಬಂಧನ
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ಇಡಿ ಕಚೇರಿಯಲ್ಲಿ ಪ್ರಶ್ನಿಸಲಾಗುತ್ತಿದೆ. ಮತ್ತೊಂದೆಡೆ, ಸಿಐಡಿ ಅಧಿಕಾರಿಗಳು ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 19: ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದ್ದಾರೆ. ನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣೆ ನಡೆಸಿದ ಬಳಿಕ, ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಇಬ್ಬರನ್ನೂ ಇಡಿ ಬಂಧಿಸಿದೆ.
ಇಡಿ ಅಧಿಕಾರಿಗಳು ಶುಕ್ರವಾರ ಸಂಜೆ ಇಬ್ಬರನ್ನೂ ಬಂಧಿಸಿ ತಡರಾತ್ರಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಇಂದಿನಿಂದ ಇಡಿ ಕಚೇರಿಯಲ್ಲಿ ಜ್ಞಾನೇಂದ್ರ ಮತ್ತು ಬಸವರಾಜ್ ಕನ್ನಾಳೆ ಅವರ ವಿಚಾರಣೆ ಮುಂದುವರೆಯಲಿದೆ. ಈ ಹಿಂದೆ, ಸಿಐಡಿ ಅಧಿಕಾರಿಗಳು ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಹವಾಲಾ ಹಣದ ವಹಿವಾಟು ನಡೆದಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಿಐಡಿ ಅಧಿಕಾರಿಗಳು ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮನೆಗಳ ಪರಿಶೀಲನೆ ನಡೆಸಿ, ಎರಡು ಮೊಬೈಲ್ ಮತ್ತು ಒಂದು ಟ್ಯಾಬ್ ವಶಕ್ಕೆ ಪಡೆದಿದ್ದಾರೆ. ಅವರೂ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
