ಉಪಚುನಾವಣೆ ನಡೆಯುತ್ತಿರುವಲ್ಲಿ ಪ್ರಚಾರಕ್ಕೆ ಹೋಗುವ ಬದಲು ಗುಬ್ಬಿಯಲ್ಲಿ ರೋಡ್ ಶೋ ನಡೆಸಿದರು ಕುಮಾರಸ್ವಾಮಿ!
ಕನ್ನಡನಾಡಿನ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಹಾರ ತುರಾಯಿಗಳಿಂದ ಸನ್ಮಾನ ಬೇಡ ಅನ್ನುತ್ತಾರೆ. ಇದೇ ನಾಡಿನ ಮಾಜಿ ಮುಖ್ಯಮಂತ್ರಿ ಒಂದು ಟ್ರಕ್ ತುಂಬ ಇರುವ ಹೂಗಳನ್ನು ತಮ್ಮ ಮೇಲೆ ಚೆಲ್ಲಿಸಿಕೊಳ್ಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಈ ಅತಿರೇಕವನ್ನು ಹೇಗೆ ವರ್ಣಿಸಬೇಕೆನ್ನುವುದು ಅರ್ಥವಾಗಲಾಗುತ್ತಿಲ್ಲ. ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಉಪಚುನಾವಣೆಯೇನೂ ನಡೆಯುತ್ತಿಲ್ಲ. ಅದರೂ ಜೆಡಿಎಸ್ ಪಕ್ಷದ ನಾಯಕ ಎಚ್ ಡಿ ಕೆ ಇಲ್ಲಿ ರೋಡ್ ಶೋ ನಡೆಸಿದ್ದಾರೆ. ವಿನಾಕಾರಣ ಪಕ್ಷದ ಕಾರ್ಯಕರ್ತರಿಂದ, ಬೆಂಬಲಿಗರಿಂದ ಕುಮಾರಣ್ಣಗೆ ಈ ಪಾಟಿ ಸ್ವಾಗತ. ಬಿಟ್ಟೂ ಬಿಡದ ಪುಷ್ಪವೃಷ್ಟಿಯ ಜೊತೆಗೆ 500 ಕೆಜಿ ಸೇಬುಹಣ್ಣುಗಳ ಮಾಲೆಯನ್ನು ಅವರಿಗೆ ಹಾಕಿ ಸ್ವಾಗತ್ತಿಸುತ್ತಿರುವುದು ಈ ವಿಡಿಯೋನಲ್ಲಿ ಕಾಣುತ್ತಿದೆ. ಹಣ್ಣುಗಳ ಮಾಲೆಯನ್ನು ಕ್ರೇನ್ ಮೂಲಕ ಹಾಕಲಾಗುತ್ತಿದೆ. ಮತ್ತೊಂದು ಭಾಗದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದೆ. ಕಾರ್ಯಕರ್ತರು ಜೋರಾಗಿ ಕಿರುಚುತ್ತಾ, ಶಿಳ್ಳೆ ಹಾಕುತ್ತಾ ಕುಮಾರಣ್ಣಗೆ ಉಧೋ ಎನ್ನುತ್ತಿದ್ದಾರೆ.
ಕನ್ನಡನಾಡಿನ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಹಾರ ತುರಾಯಿಗಳಿಂದ ಸನ್ಮಾನ ಬೇಡ ಅನ್ನುತ್ತಾರೆ. ಇದೇ ನಾಡಿನ ಮಾಜಿ ಮುಖ್ಯಮಂತ್ರಿ ಒಂದು ಟ್ರಕ್ ತುಂಬ ಇರುವ ಹೂಗಳನ್ನು ತಮ್ಮ ಮೇಲೆ ಚೆಲ್ಲಿಸಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಅವರಂತೆ ಕುಮಾರಣ್ಣ ಸಹ ಇರಬೇಕು ಅಂತೇನಿಲ್ಲ.
ಬೊಮ್ಮಾಯಿಯವರಿಗೆ ಮುಖ್ಯಮಂತ್ರಿಯಾದ ನಂತರ ಹಾರ-ತುರಾಯಿ ದುಂದು ವೆಚ್ಚ ಅನಿಸತೊಡಗಿದೆ. ಅದಕ್ಕೆ ಮೊದಲು ಕೇವಲ ಸಚಿವರಾಗಿದ್ದಾಗ ಅವರಿಗೆ ಈ ಬಗ್ಗೆ ಜ್ಞಾನೋದಯವಾಗಿರಲಿಲ್ಲ. ತಾನು ಮೊದಲಿನವರಿಗಿಂತ ಡಿಫರೆಂಟ್ ಅಂತ ಕರೆಸಿಕೊಳ್ಳುವ ಉಮೇದಿ ಬಿಟ್ಟರೆ, ಕನ್ನಡಿಗರಿಗೆ ಬೊಮ್ಮಾಯಿಯವರ ನಿರ್ಧಾರದಲ್ಲಿ ಡಿಫರೆಂಟ್ ಏನೂ ಅನಿಸುತ್ತಿಲ್ಲ.
ಹತ್ತು ಜನ ಸೇರಿಯೂ ಎತ್ತಲಾಗದಂಥ ಸೇಬುಹಣ್ಣುಗಳ ಮಾಲೆಯನ್ನು ಕುಮಾರ ಸ್ವಾಮಿಯವರ ಕುತ್ತಿಗೆಗೆ ಹಾಕಿದರೆ ಅದು ಅತಿರೇಕತನ ಬಿಟ್ಟು ಬೇರೆ ಏನನ್ನಾದರೂ ಸೂಚಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಇದೇ ಹಣ್ಣಗಳನ್ನು ಗುಬ್ಬಿ ತಾಲೂಕು ಆಸ್ಪತ್ರೆ, ತುಮಕೂರಿನ ಜಿಲ್ಲಾ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನೀಡಿದ್ದರೆ ಅವರ ದೇಹಗಳಿಗೆ ಪೌಷ್ಠಿಕಾಂಶವಾದರೂ ಸಿಗುತಿತ್ತು.
ಮಾರ್ಕೆಟ್ನಲ್ಲಿ ಒಂದು ಕೆಜಿ ಸೇಬುಹಣ್ಣುಗಳ ಬೆಲೆ ರೂ. 150 ಇದೆ. ಅಂದರೆ, ರೂ. 75,000ಗಳಷ್ಟು ಬೆಲೆಯ ಹಣ್ಣುಗಳಿವು.
ಕುಮಾರಸ್ವಾಮಿಯರಾದರೂ ತಮ್ಮ ಕಾರ್ಯಕರ್ತರಿಗೆ ತಾಕೀತು ಮಾಡಬಹುದಿತ್ತು. ಅವರಿಗೂ ತಾನು ಈಗಲೂ ಬಹಳ ಜನಪ್ರಿಯ ನಾಯಕ ಅಂತ ತೋರಿಸಿಕೊಳ್ಳುವ ಉಮೇದಿ ಇರಬೇಕು ಅನಿಸುತ್ತೆ.
ವಾರ ಕಳೆದರೆ ನಾವು ಕನ್ನಡ ರಾಜ್ಯೋತ್ಸವ ಅಚರಿಸಲಿದ್ದೇವೆ. ತಾಯಿ ಭುವನೇಶ್ವರಿಗೆ ಕನ್ನಡ ನಾಡಿನ ಎಲ್ಲ ರಾಜಕೀಯ ನಾಯಕರಿಗೆ ಸದ್ಬುದ್ಧಿಯನ್ನು ದಯಪಾಲಿಸಲಿ.
ಇದನ್ನೂ ಓದಿ: ರಾಮನಗರದಲ್ಲಿ ಮನೆ ರೂಮಿನೊಳಗೆ ಬಂಧಿಯಾದ ಚಿರತೆ! ವಿಡಿಯೋ ಇದೆ