ಯಾರು ಕುರಿ ಕಾಯ್ದಿದಿದ್ದಾರೆ ಅಂತ ಮುಖ್ಯವಲ್ಲ, ಸಮುದಾಯದ ಅಭಿವೃದ್ಧಿ ಮುಖ್ಯ: ಮುಖ್ಯಮಂತ್ರಿ ಬೊಮ್ಮಾಯಿ

ಯಾರು ಕುರಿ ಕಾಯ್ದಿದಿದ್ದಾರೆ ಅಂತ ಮುಖ್ಯವಲ್ಲ, ಸಮುದಾಯದ ಅಭಿವೃದ್ಧಿ ಮುಖ್ಯ: ಮುಖ್ಯಮಂತ್ರಿ ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 25, 2021 | 11:12 PM

ಸೋಮವಾರದಂದು ಹಾವೇರಿಯ ಹುಲ್ಲತ್ತಿ ಗ್ರಾಮದಲ್ಲಿ ತಾವು ಆಡಿದ ಮಾತು ಕುರಿತು ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಿದರು. ಕುರಿ ಕಾಯುವ ಜನ ಪಡುವ ಶ್ರಮದ ಬಗ್ಗೆ ತಮಗೆ ಬಹಳ ಗೌರವವಿದೆ ಮತ್ತು ಅವರ ಬೆವರಿನ ಬೆಲೆ ಗೊತ್ತಿದೆ ಎಂದರು.

ರಾಜ್ಯದಲ್ಲಿ ಎರಡು ವಿಧಾನ ಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್​ ಧುರೀಣರ ನಡುವಿನ ವ್ಯಾಗ್ದುದ್ದ ಕೀಳುಮಟ್ಟಕ್ಕಿಂತಲೂ ಕೆಳಹಂತವನ್ನು ತಲುಪಿದೆ. ಈಗ ಜಾತಿ ಮತ್ತು ಕುಲಗಳನ್ನು ಸಹ ವಾಕ್ಸಮರದ ಅಸ್ತ್ರಗಳನ್ನಾಗಿ ಬಳಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಚಾರದ ಅಬ್ಬರದಲ್ಲಿ ತಾವು ಕುರಿ ಕಾಯ್ದಿರುವ ಬಗ್ಗೆ ಹೇಳುತ್ತಾ ತಾವು ಕಾಯ್ದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಯ್ದಿದ್ದಾರಾ ಅಂತ ಕೇಳಿದರು. ಅವರು ಹೇಳಿದ ರೀತಿ ರಾಜಕೀಯ ನಾಯಕನಾಗಲು ಕುರಿ ಕಾಯುವುದು ಒಂದು ಅರ್ಹತೆ ಎಂಬಂತಿತ್ತು! ಬೊಮ್ಮಾಯಿ ಅವರು ಕುರುಬ ಸಮಾಜದ ಬಗ್ಗೆ ಮಾತಾಡಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಹಾಗೆ ಹೇಳಿದ್ದರು.

ಸೋಮವಾರದಂದು ಹಾವೇರಿಯ ಹುಲ್ಲತ್ತಿ ಗ್ರಾಮದಲ್ಲಿ ತಾವು ಆಡಿದ ಮಾತು ಕುರಿತು ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಿದರು. ಕುರಿ ಕಾಯುವ ಜನ ಪಡುವ ಶ್ರಮದ ಬಗ್ಗೆ ತಮಗೆ ಬಹಳ ಗೌರವವಿದೆ ಮತ್ತು ಅವರ ಬೆವರಿನ ಬೆಲೆ ಗೊತ್ತಿದೆ. ಅವರು ನೇಯುವ ಕಂಬಳಿಯ ಗೌರವವನ್ನು ತಾವು ಕಾಪಾಡಿಕೊಳ್ಳುವುದಾಗಿ ಹೇಳಿದರು. ತಾವು ಆ ಸಮುದಾಯದ ಬಗ್ಗೆ ಮಾತಾಡುವಾಗ ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ, ಸಿದ್ದರಾಮಯ್ಯನವರಿಗೆ ಅದ್ಯಾಕೆ ಚುರುಕು ತಾಕಿತೋ ಗೊತ್ತಾಗಲಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು ಕನದಾಸರ ಪದ್ಯದ ಪಲ್ಲವಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಕುಲ ಕುಲ ಕುಲವೆಂದು ನಿಮ್ಮ ಹೊಡೆದಾಡದಿರಿ

ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..

ಮುಂದುವರಿದು ಮಾತಾಡಿದ ಬೊಮ್ಮಾಯಿ ಅವರು ತಮ್ಮ ತಂದೆಯವರ ಹಾಗೆ ತಮಗೂ ಕುರುಬ ಸಮುದಾಯದೊಂದಿಗೆ ನಿಕಟ ಬಾಂಧವ್ಯ ಇದೆ ಪರಸ್ಪರ ಪ್ರೀತಿ ವಿಶ್ವಾಸಗಳಿವೆ. ಹಿಂದೆ ಮಹಾರಾಷ್ಟ್ರದಲ್ಲಿ ತಾವು ಸಹ ಕುರಿ ಕಾಯ್ದಿರುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಯಾರು ಕುರಿ ಕಾಯ್ದಿದ್ದಾರೆ, ಯಾರು ಕಾಯ್ದಿಲ್ಲ ಅನ್ನೋದು ಮುಖ್ಯವಲ್ಲ, ಆ ಸಮುದಾಯದ ಅಭಿವೃದ್ಧಿ ಮುಖ್ಯ ಎಂದರು.

ತಾವು ಆ ಕುರುಬ ಸಮುದಾಯದ ಅಭ್ಯುದಯಕ್ಕೆ ಹೊಸ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದಾಗ ನೆರದಿದ್ದ ಜನ ಚಪ್ಪಾಳೆ ತಟ್ಟಿ ಅವರ ಮಾತನ್ನು ಸ್ವಾಗತಿಸಿದರು.

ಇದನ್ನೂ ಓದಿ:   ಉಪಚುನಾವಣೆ ಪ್ರಚಾರ; ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ನಾಯಕರ ಹೋರಾಟ