ಉಪಚುನಾವಣೆ ಪ್ರಚಾರ; ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ನಾಯಕರ ಹೋರಾಟ
ಇಂದಿನಿಂದ ಬಹಿರಂಗ ಪ್ರಚಾರ ಮುಕ್ತಾಯವಾಗುವವರೆಗೂ ಜಿಲ್ಲೆಯಲ್ಲಿ ದೇವೇಗೌಡರು ಠಿಕಾಣಿ ಹೂಡಲಿದ್ದಾರೆ. ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿದ್ದಾರೆ. ಇಂದು ದೇವೇಗೌಡರು ನಡೆಸುವ ಸಭೆಯಲ್ಲಿ ಜಿಲ್ಲಾ ಮುಖಂಡರು, ಜೆಡಿಎಸ್ ಶಾಸಕರು ಭಾಗಿಯಾಗಲಿದ್ದಾರೆ.
ಹುಬ್ಬಳ್ಳಿ: ಸಿಂದಗಿ ಸಿಂಹಾಸನಕ್ಕಾಗಿ ಪ್ರಬಲ ಮೂರು ಪಕ್ಷಗಳ ಮಧ್ಯೆ ಜಟಾಪಟಿ ನಡೆದಿದೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಉಳಿಸಕೊಳ್ಳುವ ತವಕದಲ್ಲಿ ಜೆಡಿಎಸ್ ಹೋರಾಟ ಮಾಡುತ್ತಿದೆ. ಇನ್ನು ಕಳೆದುಕೊಂಡಿದ್ದ ಕ್ಷೇತ್ರದಲ್ಲಿ ಮತ್ತೇ ನೆಲ ಊರಬೇಕೆಂದು ಬಿಜೆಪಿ ಹವಣಿಸುತ್ತಿದೆ. ಇತ್ತ ಕಾಂಗ್ರೆಸ್ ಸಹ ಸಿಂದಗಿಯ ಆಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪ್ರಯತ್ನ ಮಾಡುತ್ತಿದೆ. ಈ ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ನಡೆಸುತ್ತಿದ್ದು, ಶತಾಯ ಗತಾಯ ಗೆದ್ದೇ ಗೆಲ್ಲಬೇಕೆಂದು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಚಾರ ಹುಬ್ಬಳ್ಳಿಯಿಂದ ಇಂದು (ಅಕ್ಟೋಬರ್ 18) ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10.30 ಕ್ಕೆ ಕಲಬುರಗಿ ಜಿಲ್ಲೆ ನೆಲೋಗಿಗೆ ಸಿದ್ದರಾಮಯ್ಯ ಆಗಮಿಸಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಿಂದಗಿ ಕ್ಷೇತ್ರದ ಮೊರಟಗಿಗೆ ಆಗಮಿಸಿ 11.00 ಗಂಟೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಅಭ್ಯರ್ಥಿ ಆಶೋಕ ಮನಗೂಳಿ ಪರ ಮತಯಾಚನೆ ನಡೆಸಲಿದ್ದಾರೆ.
ಮೊರಟಗಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 2 ಗಂಟೆಗೆ ಯಂಕಂಚಿಯಲ್ಲಿ ಹಾಗೂ ಸಾಯಂಕಾಲ 5 ಗಂಟೆಗೆ ಆಲಮೇಲ ಪಟ್ಟಣದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಲಿರುವ ಸಾಧ್ಯತೆಯಿದೆ. ಜೊತೆಗೆ ಜಿಲ್ಲೆಯ ಶಾಸಕರು ಹಾಗೂ ಇತರೆ ಮುಖಂಡರು ಭಾಗಿಯಾಗಲಿದ್ದಾರೆ. ಮೂರು ಸಭೆಯ ನಡೆಸಿದ ಬಳಿಕ ಸಿದ್ದರಾಮಯ್ಯ ರಾತ್ರಿ ವಿಜಯಪುರ ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜೆಡಿಎಸ್ ಕಾರ್ಯತಂತ್ರ ಬದಲಾವಣೆ ಇನ್ನು ಇಂದಿನಿಂದ ಜೆಡಿಎಸ್ ಪ್ರಚಾರದ ಹಾದಿ ಬದಲಾಗಲಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ನಾಮಪತ್ರ ಸಲ್ಲಿಕೆ ವೇಳೆ ಕುಮಾರಸ್ವಾಮಿ ಬಂಡೆಪ್ಪ ಕಾಂಶಪೂರ ಸೇರಿದಂತೆ ಇತರೆ ನಾಯಕರು ಹಾಜರಿದ್ದರು. ಆದರೆ ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರಕ್ಕೆ ಯಾವೋಬ್ಬ ರಾಜ್ಯ ಮಟ್ಟದ ಮುಖಂಡರು ಇತ್ತ ತಲೆ ಹಾಕಿರಲಿಲ್ಲ. ಅಭ್ಯರ್ಥಿ ನಾಜಿಯಾ ಅಂಗಡಿ ಸ್ಥಳಿಯ ಮುಖಂಡರೊಂದಿಗೆ ಮತಬೇಟೆ ನಡೆಸಿದ್ದರು. ಆದರೆ ನಿನ್ನೆ ನಾಜಿಯಾ ಅಂಗಡಿ ನಿವಾಸಕ್ಕೆ ಜೆಡಿಎಸ್ ವರಿಷ್ಟ ದೇವೇಗೌಡ, ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತುಕತೆ ನಡೆಸಿದರು.
ಶತಾಯ ಗತಾಯ ಸಿಂದಗಿಯಲ್ಲಿ ಗೆಲ್ಲುವ ತಂತ್ರಗಳನ್ನು ಮಾಡುತ್ತೇವೆ. ಗೆಲ್ಲಲು ಹೋರಾಡುತ್ತೇವೆ ಎಂದು ದೇವೇಗೌಡ ಹೇಳಿದ್ದಾರೆ. ಇಂದು ಮಾಜಿ ಪಿಎಂ ದೇವೇಗೌಡ ವಿಜಯಪುರ ನಗರದ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದು ಜೆಡಿಎಸ್ ಮುಖಂಡರು ಸರಣಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಚುನಾವಣಾ ತಂತ್ರಗಳನ್ನು ಹೆಣೆಯಲಿದ್ದಾರೆ. ಪ್ರಚಾರಕ್ಕೆ ವೇಗ ನೀಡಬೇಕೆಂದು ಈಗಾಗಲೇ ನಿರ್ಧಾರ ಮಾಡಿರುವ ಜೆಡಿಎಸ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಇಂದಿನಿಂದ ಬಹಿರಂಗ ಪ್ರಚಾರ ಮುಕ್ತಾಯವಾಗುವವರೆಗೂ ಜಿಲ್ಲೆಯಲ್ಲಿ ದೇವೇಗೌಡರು ಠಿಕಾಣಿ ಹೂಡಲಿದ್ದಾರೆ. ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿದ್ದಾರೆ. ಇಂದು ದೇವೇಗೌಡರು ನಡೆಸುವ ಸಭೆಯಲ್ಲಿ ಜಿಲ್ಲಾ ಮುಖಂಡರು, ಜೆಡಿಎಸ್ ಶಾಸಕರು ಭಾಗಿಯಾಗಲಿದ್ದಾರೆ. ಮತ್ತೊಂದಡೆ ಪ್ರಜ್ವಲ್ ರೇವಣ್ಣ ಸಿಂದಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪ್ರಜ್ವಲ್ ರೇವಣ್ಣ ಮತಬೇಟೆ ನಡೆಸಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಕೇಸರಿ ಪಡೆ ಅಬ್ಬರಿಸಿದೆ. ಗ್ರಾಮೀಣ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಇಂದು ರಮೇಶ ಭೂಸನೂರು ಪರ ಮತಯಾಚಿಸಲು ಸಚಿವ ಗೋವಿಂದ ಕಾರಜೋಳ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ಶಶಿಕಲಾ ಜೊಲ್ಲೆ, ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ಪ್ರಚಾರ ಮಾಡಲಿದ್ದಾರೆ.
ಸಚಿವ ಗೋವಿಂದ ಕಾರಜೋಳ ಆಸಂಗಿಹಾಳ, ಸೋಮಜಾಳ, ಮಲಘಾ, ಮಂಗಳೂರು, ಆಹೇರಿ, ಕೆರೂರು, ಹಂಚಿನಾಳ, ಕಕ್ಕಳಮೇಲಿ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಸಚಿವ ಹಾಲಪ್ಪ ಆಚಾರ್ ಪ್ರಚಾರ ಚಟ್ಟರಕಿ, ಹಚ್ಯಾಳ್, ಕನ್ನೋಳ್ಳಿ, ಗಬಸಾವಳಗಿ, ಮಾಡಬಾಳ್, ಬೆನ್ನೆಟ್ಟಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರು ಪರ ಪ್ರಚಾರ ಮಾಡಲಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಸಹ ಕ್ಷೇತ್ರದ ದೇವರನಾವದಗಿ, ಕುಮಸಗಿ, ಕಡ್ಲೇವಾಡ, ಶಂಬೇವಾಡ, ದೇವಣಗಾಂವ, ಬೊಮ್ಮನಹಳ್ಳಿ, ಗುಂದಗಿ ಗ್ರಾಮಗಳಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಸಹ ಪ್ರಚಾರದಲ್ಲಿ ತೊಡಗಲಿದ್ದಾರೆ. ಇಂದಿನಿಂದ ಘಟನಾನುಘಟಿ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿರುವುದು ಕಂಡು ಬಂದಿದೆ.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ:
ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್
ಸಿಂದಗಿ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ದೇವೇಗೌಡ ಪ್ರಚಾರ