ಸಿಂದಗಿ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ದೇವೇಗೌಡ ಪ್ರಚಾರ
ಮುಂದಿನ 10 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ. ಕುಮಾರಸ್ವಾಮಿ ಸಹ ಇಲ್ಲಿ ಸಂಚರಿಸಿ, ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ದೇವೇಗೌಡರು ಹೇಳಿದರು.
ವಿಜಯಪುರ: ಸಿಂದಗಿ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿಂದೆ ತಮ್ಮದೇ ಪಕ್ಷದ ಅಭ್ಯರ್ಥಿಯಿದ್ದ ಸಿಂದಗಿ ಕ್ಷೇತ್ರವನ್ನು ಗೆಲ್ಲಬೇಕೆಂದು ಜೆಡಿಎಸ್ ಪ್ರಯತ್ನಿಸುತ್ತಿದೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಚಾರ ನಡೆಸಿದರು. ಅವರ ಮನೆಗೂ ಭೇಟಿ ನೀಡಿದ್ದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಅ.27ರವರೆಗೆ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.
ಮುಂದಿನ 10 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ. ಕುಮಾರಸ್ವಾಮಿ ಸಹ ಇಲ್ಲಿ ಸಂಚರಿಸಿ, ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನುವುದು ನಮ್ಮ ಉದ್ದೇಶ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವುದಿಲ್ಲ. ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಅಭ್ಯರ್ಥಿ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿವೆ ಎಂದು ಅತ್ಮವಿಶ್ವಾಸ ಪ್ರದರ್ಶಿಸಿದರು. ಜೆಡಿಎಸ್ ಪಕ್ಷದಿಂದ ಬೇರೆ ಪಕ್ಷಗಳಿಗೆ ಸ್ಥಳೀಯ ಮುಖಂಡರ ವಲಸೆ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ನಾವು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಮತದಾರರ ಬಳಿಗೆ ತೆರಳು ಪ್ರತಿಯೊಂದು ವಿಷಯವನ್ನು ಅವರ ಮುಂದಿಡುತ್ತೇವೆ. ಯಾರು ಗೆಲ್ಲಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಭರವಸೆ ನುಡಿದರು.
ಜೆಡಿಎಸ್ನ ಎಲ್ಲ ಮುಖಂಡರೂ ನಾಳೆಯಿಂದ ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಎಲ್ಲ ಸಮುದಾಯಗಳ ಮುಖಂಡರನ್ನೂ ನಮ್ಮ ಪಕ್ಷದ ನಾಯಕರು ಭೇಟಿಯಾಗಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ಯಾವುದೇ ಲೋಪದೋಷದಿಂದ ಆಗದಂತೆ ನೋಡಿಕೊಳ್ಳುತ್ತೇವೆ. ಪ್ರಚಾರದ ಬಳಿಕ ನಮ್ಮ ಪಕ್ಷದ ಅಭ್ಯರ್ಥಿ ಎಷ್ಟು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬುದನ್ನು ಹೇಳುತ್ತೇನೆ ಎಂದರು.
ಚುನಾವಣಾ ಪ್ರಚಾರಕ್ಕೆ ಜೆಡಿಎಸ್ ಹೊಸ ವೇಗ ನೀಡಲಿದೆ. ನಾನೇನು ಬೆಂಗಳೂರಿಂದ ದುಡ್ಡು ತಂದು ಇಲ್ಲಿ ಮುಚ್ಚಿ ಚುನಾವಣೆ ಮಾಡುತ್ತಿಲ್ಲ. ನಮ್ಮ ಅಭ್ಯರ್ಥಿಗೆ ದಲಿತ ನಾಯಕ ಪ್ರಕಾಶ ಅಂಬೇಡ್ಕರ್ ಅವರ ಬೆಂಬಲ ಸಿಕ್ಕಿದೆ. ನನ್ನ ಗೆಳೆಯರೂ ಆಗಿರುವ ಪ್ರಕಾಶ ಅಂಬೇಡ್ಕರ್ ನಮ್ಮ ಅಭ್ಯರ್ಥಿಗೆ ಬೆಂಬಲದ ಭರವಸೆ ನೀಡಿದ್ದಾರೆ. ಹೀಗಾಗಿಯೇ ದಲಿತ ನಾಯಕ ನಾಗೇಶ ಮಾನೆ ಮಹಾರಾಷ್ಟ್ರದಿಂದ ಪ್ರಚಾರಕ್ಕೆ ಬಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಸಿಂದಗಿಯಲ್ಲಿ ಗೆಲ್ಲಲೇಬೇಕು ಎಂದು ಕುಮಾರಸ್ವಾಮಿ ಹೋರಾಡುತ್ತಿದ್ದಾರೆ. ಬೈಪಾಸ್ ಸರ್ಜರಿಯಾಗಿರುವುದರಿಂದ ಅಂಬೇಡ್ಕರ್ ಪ್ರಚಾರಕ್ಕೆ ಬರಲು ಆಗಲಿಲ್ಲ ಎಂದರು. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಕುಟುಂಬದ ಇತರ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಮುಖಂಡರು ಕೆಲ ಸಮಯ ರಹಸ್ಯ ಮಾತುಕತೆ ನಡೆಸಿದರು.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ನೆರಳಲ್ಲಿ ಸಿದ್ದರಾಮಯ್ಯ vs ಬಿಜೆಪಿ ಟ್ವೀಟ್ ವಾರ್ ಇದನ್ನೂ ಓದಿ: ಸಿಂದಗಿ ಉಪಚುನಾವಣೆ: ಬಿಜೆಪಿಗೆ ಮುಖ್ಯಮಂತ್ರಿಯ ಆಸರೆ, ಕಾಂಗ್ರೆಸ್ಗೆ ಅನುಕಂಪದ ನಿರೀಕ್ಷೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ತಂತ್ರ
Published On - 8:33 pm, Sun, 17 October 21