ನಾನು ಏನು ಮಾಡಿದ್ದೆ ಎಂದು ಪಟ್ಟಿ ಕೊಡ್ತೇನೆ; ಧಮ್ ಇದ್ರೆ ನಿಮ್ಮ ಕೆಲಸದ ಪಟ್ಟಿ ಕೊಡಿ: ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲ್

ನಾನು ಏನು ಮಾಡಿದ್ದೆ ಎಂದು ಪಟ್ಟಿ ಕೊಡ್ತೇನೆ; ಧಮ್ ಇದ್ರೆ ನಿಮ್ಮ ಕೆಲಸದ ಪಟ್ಟಿ ಕೊಡಿ: ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲ್
ಸಿದ್ದರಾಮಯ್ಯ

Siddaramaiah: ಪ್ರಧಾನಿ ಮೋದಿ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶದ ಒಟ್ಟು ಸಾಲ 135 ಲಕ್ಷ ಕೋಟಿ ರೂಪಾಯಿ ಇದೆ. ಈ ದೇಶ ಉಳಿಯುತ್ತೇನ್ರಿ. ಈ ದೇಶ ಉಳಿಯುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

TV9kannada Web Team

| Edited By: ganapathi bhat

Oct 18, 2021 | 5:17 PM


ವಿಜಯಪುರ: ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಅವರೇನು ಮಾಡಿದ್ದಾರೆಂದು ಪಟ್ಟಿಯನ್ನು ಕೊಡಲಿ. ನಾನು ಏನು ಮಾಡಿದ್ದೆ ಎಂದು ಪಟ್ಟಿಯನ್ನು ಕೊಡ್ತೇನೆ. ಧಮ್ ಇದ್ದರೆ ನಿಮ್ಮ ಕೆಲಸದ ಪಟ್ಟಿಯನ್ನು ಕೊಡಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಇಂದು (ಅಕ್ಟೋಬರ್ 18) ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನ ಮೃತಪಟ್ಟರು. ಇದಕ್ಕೆ ಕಾರಣ ಮಿಸ್ಟರ್ ಬಿಎಸ್‌ವೈ, ಡಾ.ಕೆ.ಸುಧಾಕರ್. ಇವರು ಕೊಲೆಗಡುಕರು. ಇಂತಹವರಿಂದ ರಾಜ್ಯ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಅಶೋಕ್ ಮನಗೂಳಿ ಪರ ಸಿದ್ದರಾಮಯ್ಯ ಪ್ರಚಾರ ಮಾಡಿದ್ದಾರೆ. 2018ರಲ್ಲಿ ಜನ ಯಾವುದೇ ಪಕ್ಷಕ್ಕೆ ಅಧಿಕಾರ ಕೊಟ್ಟರಲಿಲ್ಲ. ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ್ರು. ಬಿಜೆಪಿ ಇದುವರೆಗೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದವರು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಹೊಟ್ಟೆ ತುಂಬಿದವರಿಗೆ ಹಸಿವಿನ ಬಗ್ಗೆ ಗೊತ್ತಾಗಲ್ಲ. ಕುಮಾರಸ್ವಾಮಿ ಯಾವಾಗಾದ್ರೂ ಹಸಿದುಕೊಂಡಿದ್ದಾರಾ? ನಮ್ಮ ಸರ್ಕಾರದ ಅವಧಿಯಲ್ಲಿ 7 ಕೆಜಿ ಅಕ್ಕಿ ಕೊಡ್ತಿದ್ದೆವು. ಆದರೆ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಕಡಿತ ಮಾಡಿದ್ರು. ಏನು ಇವರಪ್ಪನ ಮನೆಯಿಂದ ತಂದು ಅಕ್ಕಿ ಕೊಡ್ತಿದ್ರಾ? ಜನರ ಹಣ ಜನರಿಗೆ ಕೊಡುವುದಕ್ಕೆ ಇವರಿಗೇನು ಸಮಸ್ಯೆ? ಲಾಕ್‌ಡೌನ್ ವೇಳೆ 10 ಕೆಜಿ ಅಕ್ಕಿ ಕೊಡುವಂತೆ ಹೇಳಿದ್ದೆ. ಆದರೆ ಜನರಿಗೆ 10 ಕೆಜಿ ಅಕ್ಕಿಯನ್ನೂ ಕೊಡಲಿಲ್ಲ. 10 ಸಾವಿರ ರೂಪಾಯಿಯೂ ಕೊಡಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಪರಿಹಾರ ಕೊಡುವುದಾಗಿ ಬಿಎಸ್‌ವೈ ಹೇಳಿದ್ರು. ಯಾರಿಗಾದ್ರೂ ಪರಿಹಾರ ಕೊಟ್ರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಮೃತಪಟ್ಟವರ ಬಗ್ಗೆ ತಪ್ಪು ಲೆಕ್ಕ ಕೊಟ್ಟಿದ್ದಾರೆಂದು ಆರೋಪ ಮಾಡಿದ್ದಾರೆ. ಲೂಟಿ ಹೊಡೆದಿರೋದರಲ್ಲಿ ಬೊಮ್ಮಾಯಿ ಪಾಲುದಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಾನು ಕೊಟ್ಟ ಮಾತಿನಂತೆ ಮನೆಗಳನ್ನು ಹಂಚಿಕೆ ಮಾಡಿದೆ. 15 ಲಕ್ಷ ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಆದರೆ ನಾವು ಕೊಟ್ಟ ಮನೆಗಳನ್ನು ಇವರು ಲಾಕ್ ಮಾಡಿದ್ರು. ‘ಅಭಿವೃದ್ಧಿಯೇ ಲಾಕ್’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇವರು ದುಡ್ಡು ಹೊಡೆಯುವುದಕ್ಕೆ ಬಂದಿರುವವರೇ ಹೊರತು, ಇವರು ಅಭಿವೃದ್ಧಿ ಮಾಡುವವರಲ್ಲ. ಅಚ್ಛೇ ದಿನ್ ಆಯೋಗಾ ಎಂದ್ರು, ಎಲ್ಲಪ್ಪಾ ಅಚ್ಛೇ ದಿನ್? ಡೀಸೆಲ್ 100 ರೂಪಾಯಿ, ಪೆಟ್ರೋಲ್ 100 ರೂಪಾಯಿ. ಗ್ಯಾಸ್ ಸಾವಿರ ರೂಪಾಯಿ ಎಲ್ಲಪ್ಪಾ ಅಚ್ಛೇ ದಿನ್? ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶದ ಒಟ್ಟು ಸಾಲ 135 ಲಕ್ಷ ಕೋಟಿ ರೂಪಾಯಿ ಇದೆ. ಈ ದೇಶ ಉಳಿಯುತ್ತೇನ್ರಿ. ಈ ದೇಶ ಉಳಿಯುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಇಷ್ಟೆಲ್ಲಾ ಆದ್ರೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಎಲ್ರೀ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಇದನ್ನೂ ಓದಿ: ತೈಲ ದರ ಇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಸುಳಿವು; ಚುನಾವಣೆಗೋಸ್ಕರ ಹೀಗೆ ಮಾತಾಡಿದ್ದಾರೆ ಎಂದ ಸಿದ್ದರಾಮಯ್ಯ

ಇದನ್ನೂ ಓದಿ: ಚುನಾವಣಾ ಪ್ರಚಾರದ ಮಧ್ಯೆ ಹುಬ್ಬಳ್ಳಿ ಜಿಮ್​ನಲ್ಲಿ ಸಿದ್ದರಾಮಯ್ಯ ವರ್ಕೌಟ್

Follow us on

Related Stories

Most Read Stories

Click on your DTH Provider to Add TV9 Kannada