ಕುಮಾರಸ್ವಾಮಿ ಮೇಧಾವಿ ಮತ್ತು ಜ್ಯೋತಿಷಿ, ಅವರು ಮಾತಾಡುತ್ತಿದ್ದರೆ ನಮಗೆ ಹೆಚ್ಚು ಸಂತೋಷವಾಗುತ್ತದೆ: ಡಿಕೆ ಶಿವಕುಮಾರ್
ನಗರದಲ್ಲಿ ನೀರಿನ ದರ ಕಳೆದ 10 ವರ್ಷಗಳಿಂದ ಹೆಚ್ಚಿಸಿಲ್ಲ, ವಿದ್ಯುತ್ ದರ ಹೆಚ್ಚಾದರೂ ನೀರಿನ ದರವನ್ನು ಹೆಚ್ಚಿಸುವ ಪ್ರಯತ್ನ ತಮ್ಮ ಸರ್ಕಾರ ಮಾಡಿಲ್ಲ ಎಂದು ಹೇಳಿದ ಶಿವಕುಮಾರ್, 2018 ರಲ್ಲಿ ಜಾರಿಗೊಳಿಸಲಾಗಿದ್ದ ಕಾನೂನನ್ನು ಮಾತ್ರ ಸಕ್ರಮಗೊಳಿಸಲಾಗಿದೆ ಎಂದರು. ಸಾಮಾನ್ಯ ಜನರ ಮನೆಗಳಿಗೆ ಸರಬರಾಜಾಗುವ ನೀರಿನ ಬೆಲೆಯನ್ನು ಹೆಚ್ಚಿಸಿಲ್ಲ ಎಂದು ಶಿವಕುಮಾರ್ ಒತ್ತಿ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಅಜಿತ್ ಪವಾರ್ (Ajit Pawar), ಶಿಂಧೆಯಂಥವರು ರಾಜ್ಯದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಕುಮಾರಸ್ವಾಮಿ ಭಾರೀ ಮೇಧಾವಿ, ಅನುಭವಿ ರಾಜಕಾರಣಿ ಮತ್ತು ಜ್ಯೋತಿಷಿ ಕೂಡ ಹೌದು. ಅವರ ಬಾಯಿಗೆ ಬೀಗ ಹಾಕೋದು ತನ್ನಿಂದ ಸಾಧ್ಯವಿಲ್ಲ, ಅವರು ಮಾತಾಡುತ್ತಿರಲಿ, ಅವರು ಮಾತಾಡುತ್ತಿದ್ದರೆ ತಮಗೆ ಖುಷಿ, ಸಂತೋಷ ಎಂದು ಹೇಳಿ, ಅಧಿಕಾರ ಸಿಗಲಿಲ್ಲವಲ್ಲ ಅಂತ ಪರಿತಪಿಸುತ್ತಿದ್ದಾರೆ ಮತ್ತು ಅದೇ ಹತಾಷೆಯಲ್ಲಿ ಏನೇನೋ ಬಡಬಡಿಸುತ್ತಿದ್ದಾರೆ ಎಂದರು.
ಬರದ ಸ್ಥಿತಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಐಷಾರಾಮಿ ವಿಮಾನದಲ್ಲಿ ಹಾರಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಅವರೇನು ಮೋಜು ಮಾಡೋದಿಕ್ಕೆ ದೆಹಲಿಗೆ ಹೋಗಿದ್ದರೇ? ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದರು. ಬಿಜೆಪಿ ನಾಯಕರು ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಉರುಳಿಸಲು ಶಾಸಕರನ್ನು ಹೈಜಾಕ್ ಮಾಡಿ ಅವರನ್ನು ಬೇರೆ ಊರುಗಳಿಗೆ ಕರೆದೊಯ್ಯಲು ಐಷಾರಾಮಿ ವಿಮಾನಗಳನ್ನು ಹೈರ್ ಮಾಡುತ್ತಾರೆ, ಸಿದ್ದರಾಮಯ್ಯ ಅಂಥದ್ದೇನೂ ಮಾಡಿಲ್ಲ ಎಂದು ಖಾರವಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ