ಭೂಕುಸಿತದಿಂದ ಶಿರಾಡಿ ಘಾಟ್​ ಮಾರ್ಗದಲ್ಲಿ ವಾಹನ ಸಂಚಾರ ಬಂದ್​​: ಬೆಂಗಳೂರು – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ

Updated By: Ganapathi Sharma

Updated on: Jun 26, 2025 | 8:55 AM

ಶಿರಾಡಿ ಘಾಟ್ ರಸ್ತೆಯ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿ ರಾತ್ರಿಯೆಲ್ಲ ವಾಹನ ಸವಾರರು ಪರದಾಡುವಂತಾಗಿದೆ. ಅದೃಷ್ಟವಶಾತ್, ಭೂಕುಸಿತದಿಂದ ಸಾವು-ನೋವು ಸಂಭವಿಸಿಲ್ಲ. ಇದೀಗ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದ್ದು, ಮಂಗಳೂರು ಬೆಂಗಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಹಾಸನ, ಜೂನ್ 25: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿದ ಕಾರಣ ಶಿರಾಡಿ ಘಾಟ್​ ಮಾರ್ಗದಲ್ಲಿ ವಾಹನ ಸಂಚಾರ ಬಂದ್​​ ಆಗಿದೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಪ್ರಯಾಣಕ್ಕೆ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ.

ಮಂಗಳೂರಿಗೆ ಹೇಗೆ ಹೋಗಬೇಕು?

ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ​​​​ ಬಳಸುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನ ಸವಾರರು ಕೊಡಗಿನ ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿ ಹಾಸನ ಡಿಸಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ಶಿರಾಡಿ ಘಾಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಭೂಕುಸಿತ ಸಂಭವಿಸಿದ ಕಾರಣ ಶಿರಾಡಿ ಘಾಟ್ ಮಾರ್ಗದಲ್ಲಿ ಟ್ರಾಫಿಕ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಸಕಲೇಶಪುರ ಬಳಿಯೇ ನೂರಾರು ವಾಹನಗಳು ನಿಂತಿವೆ. ಮಾರ್ಗಮಧ್ಯೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಡು ರಾತ್ರಿಯಿಂದ‌ ಶಿರಾಡಿ ಘಾಟ್ ರಸ್ತೆಯಲ್ಲಿ‌ ಸಿಲುಕಿ ಕುಡಿಯುವ ನೀರು, ಊಟ ತಿಂಡಿ ಇಲ್ಲದೆ ಪರದಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ