ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ್ ಮನೆ ಸೇರಿ 6 ಕಡೆ ರೇಡ್

Edited By:

Updated on: Jan 30, 2026 | 8:57 AM

ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್​​ಗೆ ಸಂಬಂಧಿಸಿದ ಕಚೇರಿ, ಮನೆಗಳ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಆರು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಹಿಂದೆ ವಾಲ್ಮೀಕಿ ನಿಗಮ ಹಗರಣದ ಸಂದರ್ಭದಲ್ಲಿ ಕಲ್ಲೇಶ್​ರನ್ನು ಅಮಾನತು ಮಾಡಲಾಗಿತ್ತು.

ಕೊಪ್ಪಳ, ಜನವರಿ 30: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕಿಮ್ಸ್‌ (KIMS) ಆಡಳಿತಾಧಿಕಾರಿ ಬಿ. ಕಲ್ಲೇಶ್ ನಿವಾಸ ಹಾಗೂ ಅವರ ಆಪ್ತ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧೆಡೆ ಒಟ್ಟು ಆರು ಸ್ಥಳಗಳಲ್ಲಿ ಏಕಕಾಲಕ್ಕೆ ರೇಡ್ ನಡೆಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿರುವ ಬಿ. ಕಲ್ಲೇಶ್ ನಿವಾಸ, ಅವರ ಅತ್ತೆಯ ಮನೆ, ನವಚೇತನ ಶಾಲೆ, ವಿಜ್ಞಾನ ಕಾಲೇಜು ಹಾಗೂ ಯಲಬುರ್ಗಾ ತಾಲೂಕಿನ ಚಿಕ್ಕಮನ್ನಾಪುರ ಗ್ರಾಮದಲ್ಲಿರುವ ಕಲ್ಲೇಶ್ ಸ್ವಗ್ರಾಮದ ಮನೆ ಮೇಲೂ ದಾಳಿ ನಡೆದಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಲೋಕೇಶ್ ನೇತೃತ್ವದಲ್ಲಿ ಗದಗ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬಿ. ಕಲ್ಲೇಶ್ ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಸುದ್ದಿಯಾಗಿದ್ದರು. ಆ ವೇಳೆ ಅವರನ್ನು ಅಮಾನತು ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ