ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ; ಭುಗಿಲೆದ್ದ ವಿವಾದ

Updated on: Dec 26, 2025 | 10:27 PM

ಥೈಲ್ಯಾಂಡ್ ಸೇನೆಯು ಕಾಂಬೋಡಿಯಾದಲ್ಲಿ 9 ಮೀಟರ್ ಎತ್ತರದ ವಿಷ್ಣು ಪ್ರತಿಮೆಯನ್ನು ಬುಲ್ಡೋಜರ್ ಬಳಸಿ ಕೆಡವಿದೆ. ಗಡಿ ವಿವಾದದ ಭಾಗವಾಗಿರುವ ಈ ಕ್ರಮವು ಭಾರತ ಸೇರಿದಂತೆ ವಿಶ್ವದಾದ್ಯಂತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಥೈಲ್ಯಾಂಡ್ ಈ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುತ್ತದೆ. ಈ ಘಟನೆಯು ಥೈಲ್ಯಾಂಡ್-ಕಾಂಬೋಡಿಯಾದ ಗಡಿಯಲ್ಲಿ ಮಿಲಿಟರಿ ಘರ್ಷಣೆಯನ್ನು ಹೆಚ್ಚಿಸಿದ್ದು, ಎರಡೂ ಕಡೆಗಳಲ್ಲಿ ಸಾವು-ನೋವುಗಳು ಸಂಭವಿಸಿವೆ.

ಕಾಂಬೋಡಿಯಾ, ಡಿಸೆಂಬರ್ 26: ಥೈಲ್ಯಾಂಡ್-ಕಾಂಬೋಡಿಯಾ ಗಡಿಯಲ್ಲಿ ಮಿಲಿಟರಿ ಘರ್ಷಣೆಗಳು ಮುಂದುವರೆದಿವೆ. ಥೈಲ್ಯಾಂಡ್ ಸೇನೆಯು ಕಾಂಬೋಡಿಯಾ ಗಡಿಯಲ್ಲಿ 9 ಮೀಟರ್ ಎತ್ತರದ ವಿಷ್ಣು ಪ್ರತಿಮೆಯನ್ನು ಕೆಡವಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ (Video Viral) ಆಗುತ್ತಿದೆ. ಈ ದೃಶ್ಯಗಳನ್ನು ನೋಡಿದ ನಂತರ ಪ್ರಪಂಚದಾದ್ಯಂತದ ನೆಟಿಜನ್‌ಗಳು ಮತ್ತು ಭಕ್ತರು ತೀವ್ರ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಬೋಡಿಯಾದಲ್ಲಿ ಹಿಂದೂ ನಂಬಿಕೆಯ ಮೇಲೆ ದಾಳಿ ನಡೆದಿದೆ. ಇದು ಪ್ರಪಂಚದಾದ್ಯಂತ ಹಿಂದೂಗಳ ಕೋಪವನ್ನು ಕೆರಳಿಸುತ್ತಿದೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದದಿಂದ ಪ್ರಭಾವಿತವಾಗಿರುವ ಪ್ರದೇಶದಲ್ಲಿ ಥಾಯ್ ಸೇನೆಯು ವಿಷ್ಣುವಿನ ಪ್ರತಿಮೆಯನ್ನು ಕೆಡವಿದೆ. ಈ ದಾಳಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇಂತಹ ಕೃತ್ಯಗಳು ಪ್ರಪಂಚದಾದ್ಯಂತದ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಇಂತಹ ದಾಳಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ. ಎರಡೂ ದೇಶಗಳು ಮಾತುಕತೆಯ ಮೂಲಕ ಶಾಂತಿಯತ್ತ ಹೆಜ್ಜೆ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ. ಡಿಸೆಂಬರ್ 7ರಂದು ಥೈಲ್ಯಾಂಡ್-ಕಾಂಬೋಡಿಯಾ ಗಡಿ ವಿವಾದ ಪುನರಾರಂಭವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ