Unique Social Service: ಲಖನೌ ನಗರದಲ್ಲಿ ಸೈಕಲ್ ಸವಾರರನ್ನು ಅಪಘಾತಗಳಿಂದ ರಕ್ಷಿಸಲು 22ರ ಯುವತಿ ಕೈಗೆತ್ತಿಕೊಂಡಿರುವ ಗುರಿ ಅದ್ವಿತೀಯ!
ಇದುವರೆಗೆ ಖುಷಿ ಲಖನೌ ನಗರದಲ್ಲಿ ಸುಮಾರು 1,500 ಸೈಕಲ್ ಗಳಿಗೆ ಲೈಟ್ ಗಳನ್ನು ಅಳವಡಿಸಿದಿದ್ದಾರೆ. ಇದೆಲ್ಲವನ್ನು ಅವರು ಉಚಿತವಾಗಿ ಮಾಡುತ್ತಾರೆ.
ಲಖನೌ: ನಗರದ 22-ವರ್ಷ-ವಯಸ್ಸಿನ ಯುವತಿ ಖುಷಿ ಪಾಂಡೆಯ (Khushi Pandey) ಗುರಿ ಒಂದೇ. ಲಖನೌ ನಗರದ ರಸ್ತೆಗಳಲ್ಲಿ ಓಡಾಡುವ ಸೈಕಲ್ಗಳಿಗೆ ಲೈಟ್ (light) ಗಳನ್ನು ಅಳವಡಿಸುವುದು. ಈ ಯುವತಿಯ ಕೆಲಸ ನೋಡುತ್ತಿದ್ದರೆ ಸಾರ್ವಜನಿಕ ಸೇವೆ (social service) ಮಾಡಲು ನಿರ್ದಿಷ್ಟವಾದ ಕ್ಷೇತ್ರ, ಆಯಾಮ ಬೇಕಿಲ್ಲ ಅಂತ ಅನಿಸದಿರದು. ‘ರಸ್ತೆ ಮೇಲೆ ಓಡಾಡುವ ಕಾರು ಮತ್ತು ಬೈಕ್ ಗಳಿಗೆ ಲೈಟ್ ಗಳಿರುತ್ತವೆ ಆದರೆ ಸೈಕಲ್ ಗಳಿಗಿರಲ್ಲ. ನಗರದ ಹಲವಾರು ಭಾಗಗಳಲ್ಲಿ ದಾರಿದೀಪಗಳಿಲ್ಲ. ಹಾಗಾಗಿ, ಸೈಕಲ್ ಸವಾರರೇ ಅತಿಹೆಚ್ಚು ಅಪಘಾತಗಳಿಗೆ ಈಡಾಗೋದು. ಕಾರಿನಲ್ಲಿ ಪ್ರಯಾಣಿಸುವವರಿಗೆ ಏನೂ ಅಗೋದಿಲ್ಲ, ವಾಹನ ಅವರನ್ನು ಸುರಕ್ಷಿತವಾಗಿರಿಸುತ್ತದೆ, ಆದರೆ ಸೈಕಲ್ ಸವಾರ ಗಂಭೀರ ಗಾಯಗಳಿಗೀಡಾಗುತ್ತಾನೆ,’ ಎಂದು ಖುಷಿ ಪಾಂಡೆ ಹೇಳುತ್ತಾರೆ.
ಖುಷಿ ಈ ಮಿಷನ್ ಕೈಗೆತ್ತಿಕೊಳ್ಳುವ ಹಿಂದೆ ಒಂದು ದುರಂತ ಘಟನೆಯಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಅವರ ಅಜ್ಜ ಕೆಲಸದಿಂದ ಸೈಕಲ್ ಮೇಲೆ ಮನೆಗೆ ವಾಪಸ್ಸಾಗುತ್ತಿದ್ದಾಗ ಕಾರೊಂದು ಸೈಕಲ್ ಗೆ ಢಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಭೀತಿ: ಇಂದು ರಾಜ್ಯ ಆರೋಗ್ಯ ಇಲಾಖೆ ಜೊತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸಭೆ
‘ನಾನಾಜೀ (ತಾತ) ರಸ್ತೆ ಅಪಘಾತದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು ಖಷಿಯ ಮೇಲೆ ಭಾರೀ ಪರಿಣಾಮ ಬೀರಿತ್ತು, ಅಗಲೇ ಅವಳು ಹೀಗೆ ಮಾಡುವ ಯೋಚನೆಯನ್ನು ತಲೆಗೆ ತಂದುಕೊಂಡಳು. ತನ್ನ ತಾತನ ಹಾಗೆ ಬೇರೆ ಯಾರೂ ಬಲಿಯಾಗಬಾರದು ಅನ್ನೋದು ಅವಳ ಉದ್ದೇಶವಾಗಿದೆ,’ ಎಂದು ಖುಷಿಯ ತಾಯಿ ಹೇಳುತ್ತಾರೆ.
ಇದುವರೆಗೆ ಖುಷಿ ಲಖನೌ ನಗರದಲ್ಲಿ ಸುಮಾರು 1,500 ಸೈಕಲ್ ಗಳಿಗೆ ಲೈಟ್ ಗಳನ್ನು ಅಳವಡಿಸಿದಿದ್ದಾರೆ. ಇದೆಲ್ಲವನ್ನು ಅವರು ಉಚಿತವಾಗಿ ಮಾಡುತ್ತಾರೆ.
‘ಸುಮಾರು 1,500 ಸೈಕಲ್ ಗಳಿಗೆ ನಾವು ಇದುವರೆಗೆ ಲೈಟ್ ಗಳನ್ನು ಅಳವಡಿಸಿದ್ದೇವೆ. ಆದರೆ ನಗರದ ಮತ್ತೊಂದು ಭಾಗಕ್ಕೆ ಹೋದಾಗ ನನಗೆ ಲೈಟ್ ಗಳಿಲ್ಲದ ಅನೇಕ ಸೈಕಲ್ ಗಳು ಕಾಣಿಸುತ್ತವೆ. ಹಾಗಾಗೇ, ನನ್ನ ಗುರಿಯ ಶೇಕಡ ಒಂದರಷ್ಟು ಮಾತ್ರ ನಾವು ಸಾಧಿಸಿದ್ದೇವೆ ಅನ್ನೋದು ಮನವರಿಕೆಯಾಗುತ್ತದೆ,’ ಎಂದು ಖುಷಿ ಹೇಳುತ್ತಾರೆ.
ಅವರು ಮಾಡುತ್ತಿರುವ ಕೆಲಸದ ಬಗ್ಗೆ ಕುಟುಂಬದ ಸದಸ್ಯರು ಅತೀವ ಹೆಮ್ಮೆ ಪಡುತ್ತಾರೆ.
‘ಆಕೆಗಿಂತ ಹೆಚ್ಚು ಖುಷಿ ನನಗಾಗುತ್ತದೆ. ಅವಳ ಅತ್ತಿಗೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಸಮಾಜಕ್ಕಾಗಿ ಆಕೆ ಬಹಳಷ್ಟು ಮಾಡುತ್ತಿದ್ದಾಳೆ. ಇಂಥ ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಕೆಲಸ ಮಾಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ,’ ಎಂದು ಖುಷಿಯ ಅತ್ತಿಗೆ ಹೇಳುತ್ತಾರೆ.
‘ಬೀದಿಗಳಲ್ಲಿ ಜನ ನನ್ನನ್ನು ನೋಡಿ, ಇವರು ಸಮಾಜ ಸೇವಕಿ, ಲೈಟ್ ಗಳ ಹುಡುಗಿ ಖುಷಿಯ ಅಣ್ಣ ಅಂತ ಹೇಳುವಾಗ ನನಗೆ ಬಹಳ ಸಂತೋಷವಾಗುತ್ತದೆ. ಆಕೆ ಮಾಡುತ್ತಿರುವ ಕೆಲಸದ ಬಗ್ಗೆ ಬಹಳ ಹೆಮ್ಮೆಯೆನಿಸುತ್ತದೆ,’ ಎಂದು ಖುಷಿಯ ಅಣ್ಣ ಹೇಳುತ್ತಾರೆ.
‘ತಮ್ಮ ಮಕ್ಕಳು ಸಮಾಜದಲ್ಲಿ ಮಿಂಚುವುದನ್ನು ನೋಡಲು ಯಾವ ಪೋಷಕರು ತಾನೇ ಇಷ್ಟಪಡಲಾರರು? ಪ್ರತಿಯೊಬ್ಬ ಪೋಷಕ ತನ್ನ ಸಂತಾನ ತನ್ನನ್ನು ಮೀರಿಸುವ ಖ್ಯಾತಿ ಪಡೆಯಲಿ ಎಂದು ಬಯಸುತ್ತಾನೆ, ನನ್ನ ಮಗಳು ನಾನು ನಿರೀಕ್ಷಿಸದ್ದಕ್ಕಿಂತ ಹೆಚ್ಚು ಸಾಧಿಸಿದ್ದಾಳೆ,’ ಎಂದು ಖುಷಿಯ ತಂದೆ ಹೇಳುತ್ತಾರೆ.
ಖುಷಿ ಒದಗಿಸುತ್ತಿರುವ ಸೇವೆಯಿಂದ ನಗರದ ಸೈಕಲ್ ಸವಾರರು ಸಹ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
‘ಸೈಕಲ್ ಸವಾರರಿಗೆ ಇದೊಂದು ಅದ್ಭುತವಾದ ಕೊಡುಗೆ. ಸೈಕಲ್ ಗಳಿಗೆ ಲೈಟ್ ಇರದ ಕಾರಣ ಅವು ಬೇರೆ ವಾಹನ ಸವಾರರಿಗೆ ಕತ್ತಲೆಯಲ್ಲಿ ಕಾಣದೆ ಅಪಘಾತಗಳು ಸಂಭವಿಸುತ್ತವೆ. ಖುಷಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ,’ ಎಂದು ಒಬ್ಬ ಸೈಕಲ್ ಸವಾರ ಹೇಳುತ್ತಾರೆ.
ಇದನ್ನೂ ಓದಿ: ಉತ್ತರಪ್ರದೇಶ ಈಗ ಮಾಫಿಯಾ ಬದಲಿಗೆ ಹಬ್ಬಗಳ ನಾಡು: ಸಿಎಂ ಯೋಗಿ
‘ಸೈಕಲ್ ಗಳ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಈ ಹುಡುಗಿ ಮಾಡುತ್ತಿರುವ ಕೆಲಸ ಹಿಂದೆ ಯಾರೂ ಮಾಡಿಲ್ಲ. ಸಮಾಜಕ್ಕೆ ಇದು ಅತ್ಯುತ್ತಮವಾದ ಸೇವೆ. ರಸ್ತೆಗಳಲ್ಲಿ ಸಾವಿರಾರು ಸೈಕಲ್ ಓಡಾಡುತ್ತವೆ ಮತ್ತು ಹಲವಾರು ಅಪಘಾತಗಳು ಸಂಭವಿಸುತ್ತವೆ, ಈ ಹಿನ್ನೆಲೆಯಲ್ಲಿ ಅ ಖುಷಿ ಮಾಡುತ್ತಿರುವ ಕೆಲಸ ಶ್ಲಾಘನೀಯ,’ ಎಂದು ಮತ್ತೊಬ್ಬ ಸೈಕಲ್ ಸವಾರ ಹೇಳುತ್ತಾರೆ.
ಸೈಕಲ್ ಗಳಿಗೆ ಖುಷಿ ಲೈಟ್ ಅಳವಡಿಸುವ ಕಾರ್ಯವನ್ನು ಕೆಲ ಪ್ರಮುಖ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ನಂತರ ಇಂಟರ್ನೆಟ್ ನಲ್ಲಿ ಅದು ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ