ಮಧ್ಯ ಪ್ರದೇಶದಲ್ಲಿ ರಾಮಾಯಣ ಕ್ವಿಜ್, ಗೆದ್ದವರಿಗೆ ವಿಮಾನದಲ್ಲಿ ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುವ ಅವಕಾಶ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 18, 2021 | 1:01 AM

ಶಾಲಾ ಮಕ್ಕಳ ಜೊತೆ ಜನ ಸಾಮಾನ್ಯರು ಸಹ ಕ್ವಿಜ್​ನಲ್ಲಿ ಭಾಗವಹಿಸಬಹುದಾಗಿದೆ. ಪರೀಕ್ಷೆ ಬರೆಯಲಿಚ್ಚಿಸುವವರು 100 ರೂ. ಪ್ರವೇಶ ಶುಲ್ಕ ಭರಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಭಾರತೀಯರು ನಿರ್ಮಾಣ ಕಾರ್ಯ ಯಾವಾಗ ಪೂರ್ತಿಯಾದೀತು ಅಂತ ಕಾಯುತ್ತಿದ್ದಾರೆ. ರಾಮನ ಜನ್ಮಭೂಮಿ ಅಯೋಧ್ಯೆಗೆ ತೆರಳಿ ರಾಮನಿಗೆ ಆರಾಧನೆ ಸಲ್ಲಿಸುವ ಉತ್ಕಟ ಆಸೆ ರಾಮನ ಭಕ್ತರಿಗಿದೆ. ಮಧ್ಯ ಪ್ರದೇಶ ಸರ್ಕಾರ ಇಂದಿನ ಪೀಳಿಗೆಯ ಮಕ್ಕಳು ರಾಮನ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಜ್ಞಾನ ಪಡೆಯಲು ಒಂದು ವಿಶಿಷ್ಟವಾದ ಯೋಜನೆಯನ್ನು ರೂಪಿಸಿದೆ. ರಾಮಾಯಣ ಮತ್ತು ರಾಮನ ಕುರಿತ ಒಂದು ವಿಶೇಷ ಕ್ವಿಜ್ ನಡೆಸಲು ಸರ್ಕಾರ ನಿಶ್ಚಯಿಸಿದೆ. ಈ ಪರೀಕ್ಷೆಯನ್ನು ರಾಜ್ಯದ ಎಲ್ಲ 52 ಜಿಲ್ಲೆಗಳಲ್ಲಿ ನಡೆಸಲಾಗುವುದು ಮತ್ತು ಅದನ್ನು ತುಳಸಿ ಮಾನಸ ಪ್ರತಿಷ್ಠಾನ ಮತ್ತು ಮಧ್ಯ ಪ್ರದೇಶ ಸಾಂಸ್ಕೃತಿಕ ಇಲಾಖೆ ಜಂಟಿಯಾಗಿ ನಡೆಸಲಿವೆ.

ಶಾಲಾ ಮಕ್ಕಳ ಜೊತೆ ಜನ ಸಾಮಾನ್ಯರು ಸಹ ಕ್ವಿಜ್​ನಲ್ಲಿ ಭಾಗವಹಿಸಬಹುದಾಗಿದೆ.

ಪರೀಕ್ಷೆ ಬರೆಯಲಿಚ್ಚಿಸುವವರು 100 ರೂ. ಪ್ರವೇಶ ಶುಲ್ಕ ಭರಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಕ್ವಿಜ್ನಲ್ಲಿ ರಾಮಾಯಣ, ವನವಾಸ ಮತ್ತು ಅಯೋಧ್ಯೆ ಮೇಲೆ 100 ಆಬ್ಜೆಕ್ಟಿವ್ ರೀತಿಯ ಪ್ರಶ್ನೆಗಳಿರುತ್ತವೆ ಮತ್ತು ಅವುಗಳ ಸರಿಯುತ್ತರಕ್ಕೆ ನಾಲ್ಕು ವಿಕಲ್ಪಗಳಿರುತ್ತವೆ. ಪರೀಕ್ಷಾರ್ಥಿಗಳು ಸರಿಯುತ್ತರ ಮಾರ್ಕ್ ಮಾಡಿ ಅಂಕಗಳನ್ನು ಗಳಿಸಬೇಕು. ಸದರಿ ಪರೀಕ್ಷೆಯು ಡಿಸೆಂಬರ್ 2021 ರಲ್ಲಿ ನಡೆಯಲಿದೆ.

ಪ್ರತಿ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳು ಮತ್ತು ಮೂವರು ಜನಸಾಮಾನ್ಯರನ್ನು ವಿಜೇತರೆಂದು ಘೋಷಿಸಲಾಗುವುದು. ವಿಜೇತರಿಗೆ ವಿಮಾನದ ಮೂಲಕ ಅಯೋಧ್ಯೆ ಪ್ರವಾಸಕ್ಕೆ ಏರ್ಪಾಡು ಮಾಡಲಾಗುವುದು ಮತ್ತು ರಾಮಲಲ್ಲಾ ದೇವಾಲಯದ ವಿವಿಐಪಿ ದರ್ಶನದ ಅವಕಾಶವನ್ನೂ ಕಲ್ಪಿಸಲಾಗುವುದು.

ಇದು ನಿಸ್ಸಂದೇಹವಾಗಿ ಒಂದು ಉತ್ತಮ ಪ್ರಯತ್ನ. ಬೇರೆ ರಾಜ್ಯಗಳು ಸಹ ಈ ಬಗೆಯ ಮತ್ತು ಇದಕ್ಕಿಂತ ಭಿನ್ನವಾದ ಯೋಜನೆಗಳನ್ನು ರೂಪಿಸಿ ಮಕ್ಕಳಲ್ಲಿ ರಾಮನ ಬಗ್ಗೆ ಜಿಜ್ಞಾನೆ ಹೆಚ್ಚಿಸಬಹುದು.

ಇದನ್ನೂ ಓದಿ: ಕಣ್ಣು ಕಾಣದ ಈ ಪುಟಾಣಿ ಬಾಲಕಿಗೆ ಶಾಲೆಗೆ ಹೋಗುವುದೆಂದರೆ ಸಂಭ್ರಮ; ಶಾಲೆ ಬಸ್​ ಹತ್ತಲು ಖುಷಿಯಿಂದ ಹೋಗುವ ವಿಡಿಯೋ ವೈರಲ್