ಬಡತನವನ್ನೇ ಸವಾಲಾಗಿ ಸ್ವೀಕರಿಸಿದ ಮಹಾದೇವಸ್ವಾಮಿ 14 ಚಿನ್ನದ ಪದಕ ಪಡೆದರೆ, ಭಾವನಾ 19 ಪದಕಗಳನ್ನು ತಮ್ಮವಾಗಿಸಿಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 22, 2022 | 8:51 PM

ಈಗಾಗಲೇ ಕೆ ಎಸ್ ಇ ಟಿ ಪಾಸಾಗಿರುವ ಅವರು ಪಿ ಹೆಚ್ ಡಿ ಮಾಡಬೇಕೆಂದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಯಾರಾದರೂ ನೆರವು ಒದಗಿಸಿದರೆ ಐ ಎ ಎಸ್ ಪರೀಕ್ಷೆ ಬರೆಯಬೇಕೆನ್ನುವ ಮಹದಾಸೆ ಮಹದೇವಸ್ವಾಮಿ ಇಟ್ಟುಕೊಂಡಿದ್ದಾರೆ.

ಮೈಸೂರು: ಚಾಮರಾಜನಗರದ ಪಿ ಮಹದೇವಸ್ವಾಮಿ (P Mahadevaswami) ಅವರ ಸಾಧನೆ ನಿಬ್ಬೆರಗಾಗಿಸುತ್ತದೆ ಮಾರಾಯ್ರೇ. ಮಂಗಳವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 102 ನೇ ಘಟಿಕೋತ್ಸವದಲ್ಲಿ ಅವರ ಕೊರಳಿಗೆ ಬಿದ್ದಿದ್ದು 14 ಚಿನ್ನದ ಪದಕಗಳು (gold medals) ಮತ್ತು 3 ನಗದು ಪಾರಿತೋಷಕಗಳು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಕೂಲಿ ಮಾಡುವ ಅಮ್ಮನ ಸಂಪಾದನೆ ಮತ್ತು ಪೋಷಷಣೆಯಲ್ಲಿ ಪದವಿ ವ್ಯಾಸಂಗ ಪೂರೈಸಿಸ ಅವರು ಎಮ್ ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಗಾರೆ ಕೆಲಸ (construction labour) ಮಾಡಿಕೊಂಡು ಓದಿದ್ದಾರೆ. ಅವರ ಪರಿಶ್ರಮ ಕೊಟ್ಟಿರುವ ಪ್ರತಿಫಲ ನೋಡಿ ಹೇಗಿದೆ? 14 ಚಿನ್ನದ ಪದಕಗಳು ಮತ್ತು 3 ನಗದು ಬಹುಮಾನಗಳು!! ಬಾಲ್ಯದಿಂದಲೇ ಕಷ್ಟದಲ್ಲಿ ಬೆಳೆದಿರುವುದರಿಂದ ಬದುಕಿನಲ್ಲಿ ಎದುರಾದ ಸಮಸ್ಯೆಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಈ ಹಂತಕ್ಕೆ ಬಂದಿರುವ ಮಹಾದೇವಸ್ವಾಮಿ ಅವರಿಗೆ ಸಂವಿಧಾನ ಶಿಲ್ಪಿ ಡಾ ಬಿ ಅರ್ ಅಂಬೇಡ್ಕರ್ ಅವರ ಬದುಕೇ ಪ್ರೇರೇಪಣೆ.

ಈಗಾಗಲೇ ಕೆ ಎಸ್ ಇ ಟಿ ಪಾಸಾಗಿರುವ ಅವರು ಪಿ ಹೆಚ್ ಡಿ ಮಾಡಬೇಕೆಂದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಯಾರಾದರೂ ನೆರವು ಒದಗಿಸಿದರೆ ಐ ಎ ಎಸ್ ಪರೀಕ್ಷೆ ಬರೆಯಬೇಕೆನ್ನುವ ಮಹದಾಸೆ ಮಹದೇವಸ್ವಾಮಿ ಇಟ್ಟುಕೊಂಡಿದ್ದಾರೆ.

ಇಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ಮತ್ತು ಸಾಧಕಿ ಇದ್ದಾರೆ. ಇವರ ಸಾಧನೆಯೂ ಬಹಳ ದೊಡ್ಡದು ಮಾರಾಯ್ರೇ. ಹೆಸರು ಭಾವನಾ ಮತ್ತು ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಇವರು ಪಡೆದುಕೊಂಡಿರೋದು 19 ಚಿನ್ನದ ಪದಕಗಳು ಮತ್ತು 2 ನಗದು ಪುರಸ್ಕಾರಗಳು!! ಭಾವನಾ ಅವರ ತಂದೆ ಒಬ್ಬ ಗುತ್ತಿಗೆದಾರರಾಗಿದ್ದಾರೆ. ತನ್ನ ಯಶಸ್ಸಿನಲ್ಲಿ ತಂದೆ-ತಾಯಿ, ಶಿಕ್ಷಕರು, ಮೆಂಟರ್ ಗಳ ಪಾತ್ರ ದೊಡ್ಡದು ಅಂತ ಭಾವನಾ ಹೇಳುತ್ತಾರೆ.

ತಂದೆ ಗುತ್ತಿಗೆದಾರ ನಿಜವಾದರೂ ತನ್ನದು ಐಶ್ವರ್ಯವಂತ ಕುಟುಂಬವೇನೂ ಅಲ್ಲವೆನ್ನುವ ಭಾವನಾ ತನ್ನ ಮೂಲಭೂತ ಅವಶ್ಯಕತೆಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎನ್ನುತ್ತಾರೆ. ಅಪ್ಪ ಅಮ್ಮನಿಂದ ಭಾವನಾತ್ಮಕ ಮತ್ತು ಆರ್ಥಿಕ ನೆರವು ಸಿಕ್ಕಿತೆಂದು ಅವರು ಹೇಳುತ್ತಾರೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆನ್ನುವ ಆಸೆ ಭಾವನಾ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:  Puneeth Rajkumar: ಡಾ.ರಾಜ್ ಹಾದಿಯಲ್ಲಿ ಅಪ್ಪು; ಮೈಸೂರು ವಿವಿಯಿಂದ ಪುನೀತ್​ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ