What next: ಮಹಾರಾಷ್ಟ್ರ ರಾಜಕೀಯ -ಇನ್ನೇನು ಕಾದಿದೆ? ಟಿವಿ9 ಡಿಜಿಟಲ್​ ಲೈವ್​ನಲ್ಲಿ ಮಧ್ಯಾಹ್ನ 3.30 ಕ್ಕೆ ಚರ್ಚೆ

| Updated By: ಸಾಧು ಶ್ರೀನಾಥ್​

Updated on: Jul 01, 2022 | 3:32 PM

Maharashtra Politics: ಮುಖ್ಯಮಂತ್ರಿ ಆಯ್ಕೆಯೊಂದಿಗೆ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಮುಗಿದಿಲ್ಲ. ಅಲ್ಲಿ ಇನ್ನೂ ಹೊಸ ಬೆಳವಣಿಗೆ ಆಗುವ ಎಲ್ಲ ಲಕ್ಷಣ ಕಾಣುತ್ತಿವೆ.

ಮುಖ್ಯಮಂತ್ರಿ ಆಯ್ಕೆಯೊಂದಿಗೆ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಮುಗಿದಿಲ್ಲ. ಅಲ್ಲಿ ಇನ್ನೂ ಹೊಸ ಬೆಳವಣಿಗೆ ಆಗುವ ಎಲ್ಲ ಲಕ್ಷಣ ಕಾಣುತ್ತಿವೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಸಹ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಅಬ್ಸರ್ವ್​ ಮಾಡ್ತಿದೆ. ನಮಗೆಲ್ಲಾ ಗೊತ್ತಿದೆ, ಗೊತ್ತಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿದೆ. ಉದ್ಧವ್ ಠಾಕ್ರೆ ಬಣದ ಅರ್ಜಿ ವಿಚಾರಣೆ ಮುಂದೂಡುತ್ತಾ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು…

ಉದ್ಧವ್ ಠಾಕ್ರೆ ಅವರ ಆಪ್ತರೂ ಆಗಿರುವ ಶಿವಸೇನೆಯ ಮುಖ್ಯ ಸಚೇತಕ (ಚೀಫ್ ವಿಪ್) ಸುನಿಲ್ ಪ್ರಭು ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಲ್ಲ. ಅನರ್ಹತೆಗೆ ಸಂಬಂಧಿಸಿದ ಮತ್ತೊಂದು ಅರ್ಜಿಯ ಜೊತೆಗೆ ಹೊಸ ಅರ್ಜಿಯನ್ನೂ ಜುಲೈ 11ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ವೇಳೆ ನ್ಯಾಯಮೂರ್ತಿಗಳು, ‘ನಾವು ಕಣ್ಣುಮುಚ್ಚಿ ಕುಳಿತಿಲ್ಲ. ಎಲ್ಲ ಬೆಳವಣಿಗೆಗಳನ್ನೂ ಗಮನಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

16 ಶಾಸಕರು ವಿಧಾನಸಭೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು. ಶಿಂದೆ ಸೇರಿದಂತೆ 16 ಶಾಸಕರನ್ನು ವಿಧಾನಸಭೆಯಿಂದ ಅಮಾನತು‌ ಮಾಡಬೇಕು ಎಂದು ಉದ್ದವ್ ಬಣದ ಸುನಿಲ್ ಪ್ರಭು ವಿನಂತಿಸಿದ್ದರು. 16 ಶಾಸಕರ ವಿರುದ್ಧದ ಅನರ್ಹತೆಯ ದೂರು ಬಗೆಹರಿಯುವವರೆಗೂ ಶಾಸಕರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಅವರು ಕೋರಿದ್ದರು. ಏಕನಾಥ ಶಿಂದೆ‌ ಮತ್ತು ಬಂಡಾಯ ಶಾಸಕರು ಬಿಜೆಪಿಯ ದಾಳಗಳಾಗಿ ಬಳಕೆಯಾಗುತ್ತಿದ್ದಾರೆ. ಪಕ್ಷಾಂತರ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಅವರಿಗೆ ಒಂದೇ ಒಂದು ದಿನವೂ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬಾರದು ಎಂದು ಉದ್ದವ್ ಠಾಕ್ರೆ ಬಣ ‌ಅರ್ಜಿಯಲ್ಲಿ ವಾದಿಸಿತ್ತು.

ಉದ್ಧವ್ ಠಾಕ್ರೆ ಬಣದ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಎರಡೂ ಬಣಗಳು ವಿಪ್ ಜಾರಿ ಮಾಡಿದರೆ ಯಾರ ವಿಪ್ ಊರ್ಜಿತಗೊಳ್ಳಬೇಕು ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿವರಿಸಿದರು. ಸಂವಿಧಾನಕ್ಕೆ ಅಪಚಾರ ಮಾಡಿರುವ ಶಿಂದೆ ಮತ್ತು ಅವರ ಬೆಂಬಲಿಗರಿಗೆ ಒಂದೇ ಒಂದು ದಿನವೂ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೋರಿದರು.

ನಿರ್ಬಂಧದ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್, ಏನೆಲ್ಲಾ ಆಗುತ್ತಿದೆ ಎನ್ನುವುದು ನಮಗೂ ಗೊತ್ತಿದೆ. ಆದರೆ ನಾವು ಈ ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸುತ್ತೇವೆ. ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಲಾಗಿದೆಯೇ ಎಂಬುದನ್ನೂ ವಿಮರ್ಶಿಸುತ್ತೇವೆ ಎಂದು ಹೇಳಿದರು.

ಜುಲೈ 4ರ ಸೋಮವಾರ ಏಕನಾಥ ಶಿಂದೆ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಭಾನುವಾರ (ಜುಲೈ 3) ಭಾನುವಾರ ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಈ ಕುರಿತಾದ ಚರ್ಚೆಯನ್ನು ಆ್ಯಂಕರ್​ ಚಂದ್ರಮೋಹನ್​ ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live