ಸ್ಕಾರ್ಪಿಯೋ ಕಾರುಗಳ ಬ್ರ್ಯಾಂಡ್ ಇಮೇಜ್ ಬದಲಾಯಿಸುವ ಕಾರ್ಯದಲ್ಲಿ ತೊಡಗಿದೆ ಮಹಿಂದ್ರಾ ಅಂಡ್ ಮಹಿಂದ್ರಾ
ಸ್ಕಾರ್ಪಿಯೋ ಕಾರುಗಳ ಒಟ್ಟಾರೆ ಬ್ರ್ಯಾಂಡ್ ಇಮೇಜನ್ನು ಬದಲಾಯಿಸುವ ಇರಾದೆ ಹೊಂದಿರುವ ಮಹಿಂದ್ರಾ ಆಧುನಿಕ ತತ್ವಗಳ ಹಿನ್ನೆಲೆಯಲ್ಲಿ ತನ್ನ ವಾಹನಗಳಿಗೆ ಹೊಸ ಪರಿಕಲ್ಪನೆ ನೀಡುವ ಪ್ರಯತ್ನದಲ್ಲಿದೆ.
ಮಹಿಂದ್ರಾ ಮತ್ತು ಮಹಿಂದ್ರಾ ಮೋಟಾರು ಕಂಪನಿಯ ಸ್ಕಾರ್ಪಿಯೋ ನಿಜ ಅರ್ಥದಲ್ಲಿ ರಸ್ತೆ ಮೇಲೆ ಮಹಾರಾಜನೇ. ರೋಡಲ್ಲಿ ಅದರ ಗತ್ತೇ ಬೇರೆ ಮಾರಾಯ್ರೇ. ಎದುರು ಬರುವ ವಾಹನಗಳು ತಾವಾಗಿಯೇ ದಾರಿ ಬಿಡುವಷ್ಟು ಖದರು ಮತ್ತು ಗಾಂಭೀರ್ಯತೆ ಈ ಎಸ್ಯುವಿಗೆ ಇದೆ. ಈ ವಾಹನದ ಅಭಿಮಾನಿಗಳಿಗೆ ಒಂದು ಸಂತೋಷದ ಸುದ್ದಿ ಇದೆ. ಹೊಚ್ಚ ಹೊಸ ಸ್ಕಾರ್ಪಿಯೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮಹೀಂದ್ರಾ ಸಿದ್ಧತೆ ಮಾಡಿಕೊಂಡಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹೊಸ ಸ್ಕಾರ್ಪಿಯೋ ಮುಂದಿನ ವರ್ಷ ರಸ್ತೆಗಿಳಿಯಲಿದೆ.
ಸ್ಕಾರ್ಪಿಯೋ ಕಾರುಗಳ ಒಟ್ಟಾರೆ ಬ್ರ್ಯಾಂಡ್ ಇಮೇಜನ್ನು ಬದಲಾಯಿಸುವ ಇರಾದೆ ಹೊಂದಿರುವ ಮಹಿಂದ್ರಾ ಆಧುನಿಕ ತತ್ವಗಳ ಹಿನ್ನೆಲೆಯಲ್ಲಿ ತನ್ನ ವಾಹನಗಳಿಗೆ ಹೊಸ ಪರಿಕಲ್ಪನೆ ನೀಡುವ ಪ್ರಯತ್ನದಲ್ಲಿದೆ. ಹೊಸ ತಲೆಮಾರಿನ ಸ್ಕಾರ್ಪಿಯೋ ಹೊಸ ಥಾರ್ ರೀತಿಯಲ್ಲೇ ಹೊಸ ಬಾಡಿ-ಆನ್-ಫ್ರೇಮ್ ಛಾಸಿಸ್ ಹೊಂದಲಿದೆ.
ಕಾರಿನ ಒಳಾಂಗಣ ವಿನ್ಯಾಸ ಸಹ ಬದಲಾಗಲಿದೆ. ಮಾಹಿತಿಯೊಂದರ ಪ್ರಕಾರ ಉತ್ತರ ಅಮೆರಿಕದ ತಂತ್ರಜ್ಞರಿಂದ ಕಾರಿನ ಹೊಸ ರೂಪ ಮತ್ತು ಇಂಟೀರಿಯರ್ ವಿನ್ಯಾಸಗೊಳಿಸಲಾಗಿದೆ. ಹೊಸ ಸ್ಕಾರ್ಪಿಯೋ ಕಾರು; ಥಾರ್ ಮತ್ತು ಎಕ್ಸ್ ಯುವಿ 700 ಮಾಡೆಲ್ ಗಳ ಮಿಶ್ರಣವಾಗಿದೆ ಎಂದು ಹೇಳಲಾಗುತ್ತಿದೆ.
ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳನ್ನು ಬೆಂಬಲಿಸುವ ಸಮಂಜಸವಾದ ಸಾಕಷ್ಟು ದೊಡ್ಡ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ಗೆ ಹೆಚ್ಚಿನ ಅವಕಾಶವಿದೆ. ಇದು ಬ್ಲೂಸೆನ್ಸ್ ಕನೆಕ್ಟ್ ಆಪ್ ಮೂಲಕ ಅಂತರ್ನಿರ್ಮಿತ ನ್ಯಾವಿಗೇಷನ್ ಮತ್ತು ರಿಮೋಟ್ ಆಪರೇಷನ್ ಫಂಕ್ಷನ್ ಕೂಡ ಹೊಂದಲಿದೆಯಂತೆ.
ಹೊಸ ಸ್ಕಾರ್ಪಿಯೋ ಕಾರುಗಳ ಟೆಸ್ಟ್ ಡ್ರೈವ್ ಶುರುವಾಗಿದ್ದು ಅದು ಲೇಹ್ ಮತ್ತು ಮನಾಲಿ ರಸ್ತೆಗಳಲ್ಲಿ ನಡೆಯುತ್ತಿದೆ.
ಅಂದ ಹಾಗೆ ಹೊಸ ಬೆಲೆ ಎಷ್ಟಾಗಬಹುದು? ನಮಗೂ ಗೊತ್ತಿಲ್ಲ ಮಾರಾಯ್ರೇ, ವರ್ಷಾಂತ್ಯದಲ್ಲಿ ಅದನ್ನು ಬಹಿರಂಗಗೊಳಿಸಲಾಗುತ್ತದಂತೆ.
ಇದನ್ನೂ ಓದಿ: ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್