ಮೈಸೂರಲ್ಲಿ ಮಹಿಷ ದಸರಾ ಆಚರಣೆ, ಚಾಮುಂಡಿ ಬೆಟ್ಟದಲ್ಲಿ ಆಚರಿಸಲು ಅನುಮತಿ ನಿರಾಕರಿಸಿದ್ದಕ್ಕೆ ಸ್ವಾಮೀಜಿಗಳಿಗೆ ಬೇಸರ

ಮಹಿಷ ದಸರಾ ಆಚರಣೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿತ್ತು. ಆದರೆ ಅಕ್ಟೋಬರ್ 5 ರಿಂದ ಅಕ್ಟೋಬರ್ 7 ರವರೆಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದರು.

ಮೈಸೂರಿನಲ್ಲಿ ದಸರಾ ಹಬ್ಬ ಆಚರಣೆಗೆ ವಿವಿಧ ಆಯಾಮಗಳಿವೆ. ಅಕ್ಟೋಬರ್ ಬರುತ್ತಿದ್ದಂತೆ ಈ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಆಚರಣೆ ಶುರುವಾಗುತ್ತದೆ. ಇಡೀ ತಿಂಗಳು ಇಲ್ಲಿ ಬರೀ ಉತ್ಸವಗಳೇ. ಮಂಗಳವಾರದಂದು ನಗರದ ಅಶೋಕಪುರಂನಲ್ಲಿ ಮಹಿಷ ದಸರಾವನ್ನು ಅಚರಿಸಲಾಯಿತು. ಮಹಿಷ ವಿಗ್ರಹದ ಮೆರವಣಿಗೆ ಅಶೋಕಪುರಂನಲ್ಲಿರುವ ಬುದ್ಧವಿಹಾರದಿಂದ ಅಂಬೇಡ್ಕರ್ ಉದ್ಯಾನವನದವರೆಗೆ ನಡೆಯಿತು. ಉರಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮತ್ತು ಮಾಜಿ ಮೇಯರ್ ಪುರುಷೋತ್ತಮ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಹಿಷ ದಸರಾ ಆಚರಣೆ ಸಮಿತಿ ನೀಡಿದ ಮಾಹಿತಿಯ ಪ್ರಕಾರ ಮಹಿಷನ ವಿಗ್ರಹವನ್ನು ಪಂಚಲೋಹದಲ್ಲಿ ತಯಾರಿಸಲಾಗಿದೆ.

ಮೆರವಣಿಗೆ ಅಂಬೇಡ್ಕರ್ ಪಾರ್ಕ್​ನೆಡೆ ಸಾಗುತ್ತಿದ್ದಾಗ ಜನ ಮಹಿಷನಿಗೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು.

ಅಸಲಿಗೆ, ಮಹಿಷ ದಸರಾ ಆಚರಣೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿತ್ತು. ಆದರೆ ಅಕ್ಟೋಬರ್ 5 ರಿಂದ ಅಕ್ಟೋಬರ್ 7 ರವರೆಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದರು. ಅವರು ಅನುಮತಿ ನೀಡದೆ ಹೋಗಿದ್ದು ಜ್ಞಾನ ಪ್ರಕಾಶ ಸ್ವಾಮೀಜಿ ಅವರಿಗೆ ಸರಿ ಕಾಣಲಿಲ್ಲ.

ಜಿಲ್ಲಾಧಿಕಾರಿಗಳು ಒಂದು ರಾಜಕೀಯ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ, ಹಬ್ಬಗಳ ಆಚರಣೆಗೆ ಭಾರತದ ಸಂವಿಧಾನವೇ ಅವಕಾಶ ನೀಡಿರುವಾಗ ಅದನ್ನು ಜಿಲ್ಲಾಧಿಕಾರಿಗಳು ಹೇಗೆ ನಿರಾಕರಿಸುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿ ಪಕ್ಷವೊಂದರ ಕಚೇರಿ ಅಂತಾದ್ರೆ ಅನುಮತಿ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಅಂತ ಅವರು ತಮ್ಮ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:  Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​; ಪ್ರಧಾನಿ ಮೋದಿ ವಿರುದ್ಧ ಟೀಕೆ

Click on your DTH Provider to Add TV9 Kannada