ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಸಾಕ್ಷ್ಯ ನೀಡಲು ಕೋರ್ಟ್ ಎದುರು ಹಾಜರಾಗಿದ್ದೆ: ಡಿಕೆ ಶಿವಕುಮಾರ

ದೇಶದಲ್ಲಿ ಕಾನೂನೇ ಇಲ್ಲದಂತಾಗಿದೆ ಎಂದ ಶಿವಕುಮಾರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿಭಟನೆ ನಡೆಸುವ ಅವಕಾಶವಿರುತ್ತದೆ, ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸಾತ್ಮಕ ಪ್ರತಿಭಟನೆಗಳಲ್ಲಿ ನಾವು ನಂಬಿಕೆಯಿಟ್ಟುಕೊಂಡಿದ್ದೇವೆ, ಎಂದರು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಮಂಗಳವಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಳ್ಯದ ನ್ಯಾಯಾಲಯದೆದುರು ಹಾಜರಾಗಿ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರಕರಣದ ಹಿನ್ನೆಲೆ ಮತ್ತು ಬೇರೆ ವಿಷಯಗಳ ಬಗ್ಗೆಯೂ ಮಾತಾಡಿದರು. ತಾವು ಇಂಧನ ಸಚಿವರಾಗಿದ್ದಾಗ ಒಬ್ಬ ವ್ಯಕ್ತಿ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಸುಳ್ಯದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಸಾಕ್ಷ್ಯಕ್ಕಾಗಿ ಮಂಗಳವಾರದಂದು ತನ್ನೆದಿರು ಹಾಜರಾಗುವಂತೆ ಕೋರ್ಟ್ ನೋಟೀಸ್ ಜಾರಿ ಮಾಡಿದ್ದರಿಂದ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಇಲ್ಲಿಗೆ ಬಂದಿದ್ದು ಎಂದು ಶಿವಕುಮಾರ ಹೇಳಿದರು.

ಅದಾದ ಮೇಲೆ ಬಿಜೆಪಿ ಕುರಿತು ಮಾತಾಡಿದ ಡಿಕೆಶಿ ಅವರು ಅದರ ಕಾರ್ಯಕರ್ತರ ಉಪಟಳ ಜಾಸ್ತಿಯಾಗುತ್ತಿದೆ ಎಂದು ಹೇಳಿದರು. ಇತ್ತೀಚಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು, ಕಾಂಗ್ರೆಸ್ ಪಕ್ಷದ ಪರವಾಗಿ ಮಾತಾಡಿದ್ದರಿಂದ ಬಿಜೆಪಿಯ ಕಾರ್ಯಕರ್ತರು ಅವರಿಗೆ ಫೋನಾಯಿಸಿ ಅತಿ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಅದರ ಕಾರ್ಯಕರ್ತರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಪೊಲೀಸರು ಕಾನೂನನ್ನು ಅವರ ಕೈಗಳಿಗೆ ಕೊಟ್ಟು ತಮಾಷೆ ನೋಡುತ್ತಿದ್ದಾರೆ ಅಂತ ಶಿವಕುಮಾರ ವ್ಯಂಗ್ಯವಾಡಿದರು.

ದೆಹಲಿಯಲ್ಲಿ ರೈತರು 11 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡುತ್ತಿಲ್ಲ ಮತ್ತು ತಮ್ಮ ಸಂಪುಟದ ಯಾವೊಬ್ಬ ಸಚಿವನನ್ನೂ ರೈತರಲ್ಲಿಗೆ ಕಳಿಸಿಲ್ಲ. ದೇಶದಲ್ಲಿ ಕಾನೂನೇ ಇಲ್ಲದಂತಾಗಿದೆ ಎಂದ ಶಿವಕುಮಾರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿಭಟನೆ ನಡೆಸುವ ಅವಕಾಶವಿರುತ್ತದೆ, ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸಾತ್ಮಕ ಪ್ರತಿಭಟನೆಗಳಲ್ಲಿ ನಾವು ನಂಬಿಕೆಯಿಟ್ಟುಕೊಂಡಿದ್ದೇವೆ, ಎಂದರು.

ಇದನ್ನೂ ಓದಿ:  Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್​

Click on your DTH Provider to Add TV9 Kannada