ಮಂಡ್ಯ: ಆಲಕೆರೆ ಶಾಲೆಯಲ್ಲಿ ಮೊಟ್ಟೆ ಗಲಾಟೆ, ಪರ-ವಿರೋಧ ಶುರುವಾಗಿದ್ದೇಕೆ ನೋಡಿ
ಮಂಡ್ಯದ ಆಲಕೆರೆ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. 120 ಮಕ್ಕಳಿರುವ ಶಾಲೆಯ 80 ಮಂದಿ ಪೋಷಕರಿಂದ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತವಾಗಿದೆ. ಹಾಗಾದರೆ, ಈ ವಿರೋಧಕ್ಕೆ ಕಾರಣವೇನು? ಮೊಟ್ಟೆ ವಿತರಣೆ ವಿರುದ್ಧ ಇರುವವರ ಹೇಳಿಕೆಗಳೇನು? ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ, ಜುಲೈ 23: ಮಂಡ್ಯ ತಾಲೂಕಿನ ಆಲಕೆರೆ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಮುಂದಾಗಿರುವುದು ವಿವಾದಕ್ಕೆ ಗ್ರಾಸವಾಗಿದೆ. ಪೋಷಕರ ಒಂದು ಗುಂಪು ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದು ಆಗ್ರಹಿಸಿದ್ದು, ಮತ್ತೊಂದು ಗುಂಪು ಮೊಟ್ಟೆ ವಿತರಣೆ ಬೇಡ ಎಂದು ಆಗ್ರಹಿಸಿದೆ. 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳ ಪೋಷಕರು ಮೊಟ್ಟೆ ಬೇಡ ಎನ್ನುತ್ತಿದ್ದಾರೆ. ಶಾಲೆ ಬಳಿ ವೀರಭದ್ರೇಶ್ವರಸ್ವಾಮಿ ದೇಗುಲ ಇರುವುದರಿಂದ ಮೊಟ್ಟೆ ವಿತರಣೆ ಮಾಡಬಾರದು. ದೇಗುಲ ಸುತ್ತಮುತ್ತ ಮಾಂಸಾಹಾರ, ಮೊಟ್ಟೆ ಸ್ಥಳೀಯವಾಗಿ ನಿಷೇಧಿಸಲಾಗಿದೆ. ಈ ಕಾರಣಕ್ಕೆ ಶಾಲೆಯಲ್ಲಿ ಮೊಟ್ಟೆ ವಿತರಿಸದಿರಲು ಎಸ್ಡಿಎಂಸಿ ನಿರ್ಧರಿಸಿತ್ತು. 3 ವರ್ಷದಿಂದ ಮೊಟ್ಟೆಗೆ ಬದಲಾಗಿ ಬಾಳೆಹಣ್ಣು, ಮಿಠಾಯಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಮೊಟ್ಟೆ ವಿತರಣೆಗೆ ಮುಂದಾಗಿದ್ದು, ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ಎಂಬ ಆರೋಪ ವ್ಯಕ್ತವಾಗಿದೆ. ಮೊಟ್ಟೆ ತಿನ್ನುವ ವಿದ್ಯಾರ್ಥಿಗಳಿಗೆ ಅವರ ಮನೆಗೆ ಮೊಟ್ಟೆ ತಲುಪಿಸಿ, ಶಾಲೆಯಲ್ಲಿ ಮೊಟ್ಟೆ ಬೇಯಿಸಿ ವಿತರಿಸಬೇಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ವೇಳೆ ಮೊಟ್ಟೆ ಕೊಟ್ಟಿದ್ದೇ ಆದಲ್ಲಿ ಮಕ್ಕಳ ಟಿಸಿ ಕೊಟ್ಟುಬಿಡಿ, ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು 80 ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ. ಆದರೆ, ಪೌಷ್ಟಿಕಾಂಶ ದೃಷ್ಟಿಯಿಂದ ಮೊಟ್ಟೆ ನೀಡುವಂತೆ ಕೆಲವರು ಆಗ್ರಹಿಸಿದ್ದಾರೆ. ಮೊಟ್ಟೆ ವಿವಾದದಿಂದ ಶಿಕ್ಷಣ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ. ಮೊಟ್ಟೆ ಕೊಟ್ಟರೆ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ, ಕೊಡದಿದ್ದರೆ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆ ಭಯ ಎದುರಾಗಿದೆ.