ಮಂಡ್ಯ: ಹಳ್ಳಿಕಾರ್ ತಳಿಯ ಹಸುಗಳಿಗೂ ನಡೀತು ಭರ್ಜರಿ ಸೀಮಂತ ಶಾಸ್ತ್ರ!
ಹಸುಗಳಿಗೆ ಎಲ್ಲಾದರೂ ಸೀಮಂತ ಶಾಸ್ತ್ರ ಮಾಡುವುದು ನೋಡಿದ್ದೀರಾ!? ಅದರಲ್ಲೂ, ಮನುಷ್ಯರಿಗೆ ಮಾಡುವಂತೆ ಸಂಪ್ರದಾಯಬದ್ಧವಾಗಿ ದನಗಳಿಗೆ ಸೀಮಂತ ಮಾಡುತ್ತಾರಾ? ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ಹಸುಗಳಿಗೂ ಭರ್ಜರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿ ಜನರಿಗೆ ಹೋಳಿಗೆ ಊಟ ಬಡಿಸಲಾಗಿದೆ! ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ, ಸೆಪ್ಟೆಂಬರ್ 15: ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ರೈತ ಕುಟುಂಬವೊಂದು ಹಳ್ಳಿಕಾರ್ ತಳಿಯ ಹಸುಗಳಿಗೆ ಸೀಮಂತ ಮಾಡಿ ಸಂಭ್ರಮಿಸಿದೆ. ಯುವ ರೈತ ಹೇಮಂತ್ ಎಂಬವರ ಮನೆಯಲ್ಲಿ, ಗರ್ಭಧರಿಸಿದ ಎರಡು ಹಸುಗಳಿಗೆ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ನೇವೇರಿಸಲಾಯಿತು. ಹಸುಗಳ ಸೀಮಂತ ಶಾಸ್ತ್ರಕ್ಕೆ ನೆಂಟರಿಷ್ಟರು ಹಾಗೂ ಸ್ನೇಹಿತರನ್ನು ಕರೆದು ಒಬ್ಬಟ್ಟು ಊಟ ಹಾಕಿಸಿ ಹೇಮಂತ್ ಕುಟುಂಬದವರು ಸಂಭ್ರಮ ಪಟ್ಟರು. ಮನೆಯ ಮುಂದೆ ಶಾಮಿಯಾನ ಹಾಕಿಸಿ, ವೇದಿಕೆ ನಿರ್ಮಿಸಿ ಹಸುಗಳಿಗೆ ಅಲಂಕಾರ ಮಾಡಿ ಸೀಮಂತ ನೆರವೇರಿಸಿದರು. ತಟ್ಟೆ ತುಂಬುವ ಶಾಸ್ತ್ರದಿಂದ ಹಿಡಿದು ಆರತಿ ಬೆಳಗಿ ಸಂಪ್ರದಾಯದಂತೆ ಹಸುಗಳಿಗೆ ಸೀಮಂತ ಮಾಡಲಾಯಿತು. ಪದವಿ ಓದುತ್ತಿರುವ ಯುವ ರೈತ ಹೇಮಂರ್ಗೆ ಹಳ್ಳಿಕಾರ್ ತಳಿಯ ಹಸುಗಳ ಮೇಲೆ ವಿಪರೀತ ಪ್ರೀತಿ-ವ್ಯಾಮೋಹವಿದ್ದು, ಹಸುಗಳಿಗೆ ಕನಸು ಹಾಗೂ ನನಸು ಎಂದು ಹೆಸರಿಟ್ಟಿದ್ದರು.