ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ: 3 ಕೋಟಿ ರೂ. ವೆಚ್ಚದಲ್ಲಿ ಹಾಕಿದ ರಸ್ತೆ ಮೂರೇ ತಿಂಗಳಲ್ಲಿ ಮತ್ತೆ ಗುಂಡಿ

Edited By:

Updated on: Feb 12, 2026 | 10:26 AM

ಮಂಡ್ಯದಿಂದ ಪಾಂಡವಪುರಕ್ಕೆ ಹೋಗುವ ಮೂರು ಕೋಟಿ ರೂಪಾಯಿ ವೆಚ್ಚದ ರಸ್ತೆ ಮೂರೇ ತಿಂಗಳಲ್ಲಿ ಸಂಪೂರ್ಣವಾಗಿ ಹಾಳಾಗಿದೆ. ಗುಂಡಿಗಳನ್ನು ಮುಚ್ಚಿದರೂ ಪದೇ ಪದೇ ಕಿತ್ತು ಬರುತ್ತಿದ್ದು, ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ಹಲವರು ಬಿದ್ದು ಗಾಯಗೊಂಡಿದ್ದು, ಹೊಸ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಡ್ಯ,ಫೆ.12: ರಾಜ್ಯಾದ್ಯಂತ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದೇ ನಿಟ್ಟಿನಲ್ಲಿ ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಗೆ ತೇಪೆ ಹಾಕುವ ಕೆಲಸವನ್ನು ಮಾಡಲಾಗಿತ್ತು. ಆದರೆ, ದುರಸ್ತಿ ಕಾರ್ಯ ಮುಗಿದ ಮೂರೇ ತಿಂಗಳಲ್ಲಿ ರಸ್ತೆಯಲ್ಲಿ ಮತ್ತೆ ಬೃಹತ್ ಗುಂಡಿಗಳು ಕಾಣಿಸಿಕೊಂಡಿರುವುದು ಸ್ಥಳೀಯರು ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯ ಡಾಂಬರ್ ಪದೇ ಪದೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಯ ಗುಣಮಟ್ಟವನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ. ಒಮ್ಮೆ ಡಾಂಬರ್ ಕಿತ್ತು ಹೋದ ನಂತರ, ಅದನ್ನು ಸರಿಪಡಿಸಲು ಮುಂದಾದರೂ, ಕೇವಲ ಹತ್ತು ದಿನಗಳಲ್ಲೇ ಮತ್ತೆ ಕಿತ್ತು ಬರುತ್ತದೆ. ಇದು “ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತೆ ಕಂಟ್ರ್ಯಾಕ್ಟರ್‌ಗಳ ಜೇಬು ತುಂಬಿಸುವ ಕೆಲಸವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆಗಳನ್ನು ಸುರಕ್ಷಿತವಾಗಿ ಮಾಡುವ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಪಡೆದುಕೊಂಡು ಇಂತಹ ಕಳಪೆ ಕೆಲಸ ಮಾಡುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ರಸ್ತೆ ಕೇವಲ ಒಂದು ಸ್ಥಳದಲ್ಲಿ ಹಾಳಾಗಿಲ್ಲ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಈ ರೀತಿಯ ಗುಂಡಿಗಳು ಬಿದ್ದಿವೆ. ಈ ರಸ್ತೆ ಮಂಡ್ಯ ಮತ್ತು ಪಾಂಡವಪುರ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಗುಂಡಿಗಳಿಂದಾಗಿ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಸಡನ್ ಆಗಿ ಗುಂಡಿಗಳು ಕಾಣಿಸುವುದರಿಂದ ಹಲವರು ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಮೂರ್ನಾಲ್ಕು ಜನ ಈಗಾಗಲೇ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us