ಸಿಕ್ಸ್ ಪ್ಯಾಕ್, ಟ್ಯಾಟು, ಶೋಕಿ ಜೀವನ: ಈತ ವಿರಾಟ್ ಕೊಹ್ಲಿಯೋ ಅಥವಾ ಯಾರೋ ಸೆಲೆಬ್ರಿಟಿ ಅಲ್ಲ, ಪಿಡಿಒ!
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯತ್ ಪಿಡಿಒ ಶಶಿಧರ್ ಅವರನ್ನು ಕರ್ತವ್ಯಲೋಪ ಹಾಗೂ 1.5 ಕೋಟಿ ರೂ.ಗೂ ಅಧಿಕ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಮಂಡ್ಯ ಜಿ.ಪಂ. ಸಿಇಒ ಕೆ.ಆರ್. ನಂದಿನಿ ಆದೇಶ ನೀಡಿದ್ದು, 15ನೇ ಹಣಕಾಸು ಅನುದಾನ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆಯಲ್ಲಿನ ನಿಯಮ ಉಲ್ಲಂಘನೆ ಪ್ರಮುಖ ಆರೋಪಗಳಾಗಿವೆ.
ಮಂಡ್ಯ, ಸೆಪ್ಟೆಂಬರ್ 1: ಆತನಿಗೆ ಸಿಕ್ಸ್ ಪ್ಯಾಕ್ ಇದೆ, ಟ್ಯಾಟು ಹಾಕಿಸ್ಕೊಂಡಿದ್ದಾನೆ. ವೈಭವದ ಜೀವನ ಮಾಡ್ತಿದ್ದಾನೆ. ಅಷ್ಟಕ್ಕೂ ಆ ವ್ಯಕ್ತಿ ಯಾರೋ ಸೆಲೆಬ್ರಿಟಿ ಅಂತೂ ಅಲ್ಲವೇ ಅಲ್ಲ, ಜಸ್ಟ್ ಪಿಡಿಒ! ಹಾಗಾದ್ರೆ ಆತನಿಗೆ ಅಷ್ಟೊಂದು ಐಷಾರಾಮಿ ಜೀವನ ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ಬೆನ್ನಲ್ಲೇ ಇದೀಗ 1.5 ಕೋಟಿ ರೂ. ಅಕ್ರಮದ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಶಿಧರ್ ಅವರನ್ನು ಕರ್ತವ್ಯಲೋಪ ಮತ್ತು 1.5 ಕೋಟಿ ರೂಪಾಯಿಗೂ ಅಧಿಕ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಪಿಡಿಒ ಶಶಿಧರ್ ಅವರ ವಿರುದ್ಧ ಎರಡು ಪ್ರಮುಖ ಆರೋಪಗಳು ಕೇಳಿಬಂದಿದ್ದವು. ಮೊದಲನೆಯದಾಗಿ, 15ನೇ ಹಣಕಾಸು ಆಯೋಗದ ಅನುದಾನದ ವೆಚ್ಚ ನಿರ್ವಹಣೆಯಲ್ಲಿ ನಿಯಮಾವಳಿಗಳನ್ನು ಪಾಲಿಸಿಲ್ಲ ಎನ್ನಲಾಗಿದೆ. ಅಲ್ಲದೆ, ಅಗತ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೆ ಮತ್ತು ಕಾರ್ಯವಿಧಾನದ ಲೋಪಗಳನ್ನು ಎಸಗಿರುವುದೂ ದೂರಿನಲ್ಲಿ ಉಲ್ಲೇಖವಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, 13.10 ಲಕ್ಷ ರೂಪಾಯಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಿಸದಿರುವ ಆರೋಪವಿದೆ. ಈ ಹಣಕ್ಕೆ ಸಂಬಂಧಿಸಿದ ಸುಮಾರು 11 ರಿಂದ 12 ಪ್ರಮುಖ ಕಡತಗಳು ಕಾಣೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಇನ್ನೂ 27 ಲಕ್ಷ ರೂಪಾಯಿಗಳ ಮೊತ್ತಕ್ಕೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಮಂಡ್ಯ ಜಿ.ಪಂ. ಸಿಇಒ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
