ಬಂಟ್ವಾಳ: ಅಂಗಡಿಗೆ ನುಗ್ಗಿದ ಕಾರು, ವೃದ್ಧೆ ಸಾವು
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದಲ್ಲಿ ಕಾರು ಅಪಘಾತದಲ್ಲಿ 91 ವರ್ಷದ ವೃದ್ಧೆ ಸುಮತಿ ಮೃತಪಟ್ಟಿದ್ದಾರೆ. ಕಾರು ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಫೆಬ್ರವರಿ 25: ಕಾರು (Car) ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಮೃಪಟ್ಟಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ನಡೆದಿದೆ. ವಾಮದಪದವು ನಿವಾಸಿ ಸುಮತಿ (91) ಮೃತ ವೃದ್ಧೆ. ಅಪಘಾತದ ಭೀಕರ ದೃಶ್ಯ ಅಂಗಡಿ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶೋಭಾ ಎಂಬವರು ಕಾರು ಚಲಾಯಿಸುತ್ತಿದ್ದರು. ಕಾರು ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಕಾರು ಮೊದಲಿಗೆ ಅಂಗಡಿ ಬಳಿ ಇದ್ದ ಗ್ರಾಹಕ ಲೂಯಿಸ್ ಡಿಕೋಸ್ತಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ, ಅಂಗಡಿ ಮುಂದೆ ಕೂತಿದ್ದ ವೃದ್ಧೆ ಸುಮತಿಯವರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ವೃದ್ಧೆ ಸುಮತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ಕೂಡಲೆ ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಮತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.