ಪುನೀತ್ ರಾಜಕುಮಾರ್ ಸೇರಿದಂತೆ ಚಿತ್ರರಂಗದ ಹಲವಾರು ದಿಗ್ಗಜರು 2021 ರಲ್ಲಿ ನಮ್ಮನ್ನಗಲಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2021 | 9:43 PM

ವಯಸ್ಸಿನಲ್ಲಿ ಪುನೀತ್ ಅವರಿಗಿಂತಲೂ ಚಿಕ್ಕವರಾಗಿದ್ದ ಅತ್ಯಂತ ಪ್ರತಿಭಾವಂತ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಭೀಕರ ಅಪಘಾತವೊಂದರಲ್ಲಿ ಮೆದುಳಿಗೆ ಪೆಟ್ಟು ತಿಂದು ಜೂನ್ 15ರಂದು ಪ್ರಾಣ ಕಳೆದುಕೊಂಡರು.

ಇವತ್ತು ಕೊನೆಗಳ್ಳುತ್ತಿರುವ 2021 ಕನ್ನಡ ಮತ್ತು ಬೇರೆ ಚಿತ್ರರಂಗಗಳ ಪಾಲಿಗೂ ಕರಾಳವಾಗಿತ್ತು. ಕೇವಲ 46 ವರ್ಷ ವಯಸ್ಸಿನ ಮತ್ತು ಅತ್ಯಂತ ಫಿಟ್ ಆಗಿದ್ದ ಕನ್ನಡ ಚಿತ್ರರಂಗದ ಧೃವತಾರೆ ಪುನೀತ್ ರಾಜಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತಕ್ಕೊಳಗಾಗಿ ದಾರುಣ ಮರಣವನ್ನಪ್ಪುತ್ತಾರೆ ಅಂತ ಆ ಭಗವಂತನೂ ಅಂದುಕೊಂಡಿರಲಾರ. ಅವರು ಗತಿಸಿ ಎರಡು ತಿಂಗಳು ಕಳೆದರೂ ಕನ್ನಡನಾಡು ಅವರಿಗಾಗಿ ರೋದಿಸುತ್ತಿದೆ ಮತ್ತು ಚಿತ್ರರಂಗ ಇನ್ನೂ ಚೇತರಿಸಿಕೊಂಡಿಲ್ಲ. ಅವರು ಮಾಡಿರುವ ಸಮಾಜ ಸೇವೆ ಎಣಿಕೆ ನಿಲುಕಲಾರದು. ಕನ್ನಡನಾಡು ಇನ್ನೊಬ್ಬ ಪುನೀತ್ ನನ್ನು ಮುಂದೆ ಯಾವತ್ತೂ ಕಾಣಲಾರದು.

ವಯಸ್ಸಿನಲ್ಲಿ ಪುನೀತ್ ಅವರಿಗಿಂತಲೂ ಚಿಕ್ಕವರಾಗಿದ್ದ ಅತ್ಯಂತ ಪ್ರತಿಭಾವಂತ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಭೀಕರ ಅಪಘಾತವೊಂದರಲ್ಲಿ ಮೆದುಳಿಗೆ ಪೆಟ್ಟು ತಿಂದು ಜೂನ್ 15ರಂದು ಪ್ರಾಣ ಕಳೆದುಕೊಂಡರು. ಸ್ಯಾಂಡಲ್​ವುಡ್​ ವಿಜಯ್ ಪ್ರತಿಭೆಯನ್ನು ಗುರುತಿಸಿತ್ತು ಮತ್ತು ಅವರ ಮುಂದೆ ಉಜ್ವಲವಾದ ಭವಿಷ್ಯವಿತ್ತು.

ಹಿಂದಿ ಬಿಗ್ ಬಾಸ್ ಖ್ಯಾತಿಯ ಸಿದ್ದಾರ್ಥ ಶುಕ್ಲ ಸೆಪ್ಟಂಬರ್ 2ರಂದು ಕೇವಲ ತಮ್ಮ 40 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸತ್ತಿದ್ದು ಜನರಲ್ಲಿ ಆಘಾತ ಹಾಗೂ ದಿಗ್ಭ್ರಮೆ ಮೂಡಿಸಿತು. ಅವರಿಗೂ ಕಿರುತೆರೆ ಮತ್ತು ಬಾಲಿವುಡ್ನಲ್ಲಿ ಭವ್ಯ ಭವಿಷ್ಯವಿತ್ತು. ಸದೃಢಕಾಯದವರಾಗಿದ್ದ ಅವರು ನೋಡಲು ಬಹಳ ಆಕರ್ಷಕವಾಗಿದ್ದರು.

ಅಭಿನಯ ಶಾರದೆ ಜಯಂತಿ ಕೆಲ ಸಮಯದವರೆಗೆ ಅನಾರೋಗ್ಯದಿಂದ ಬಳಲಿ ಜುಲೈ 26 ರಂದು ತಮ್ಮ 76 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರ್ತಿಗೊಳಿಸಿದರು. 70 ಮತ್ತು 80 ದಶಕದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದ ಜಯಂತಿ ಆ ಜಮಾನಾದ ಎಲ್ಲ ನಾಯಕ ನಟರೊಂದಿಗೆ ನಟಿಸಿದ್ದರು.

ಭಾರಿ ಬಜೆಟ್ ಸಿನಿಮಾಗಳನ್ನು ನಿರ್ಮಿಸಿ ಕೋಟಿ ರಾಮು ಅನಿಸಿಕೊಂಡಿದ್ದ ನಿರ್ಮಾಪಕ ರಾಮು ಅವರು ಏಪ್ರಿಲ್ 26 ರಂದು ಕೊರೊನಾ ಮಹಾಮಾರಿಗೆ ಬಲಿಯಾದರು. ಕನ್ನಡದ ಜನಪ್ರಿಯ ನಟಿ ಮಾಲಾಶ್ರೀ ಅವರನ್ನು ರಾಮು ಮದುವೆಯಾಗಿದ್ದರು.

ಪೋಷಕ ನಟನಾಗಿ ಸುಮಾರು 650 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸತ್ಯಜಿತ್ ಅವರು ವಯೋಸಹಜ ಕಾಯಿಲೆಗಳಿಂದ ನರಳಿ ಅಕ್ಟೋಬರ್ 10 ರಂದು ನಿಧನ ಹೊಂದಿದರು. ಗ್ಯಾಂಗ್ರೀನ್ ಅಗಿದ್ದರಿಂದ ಅವರ ಕಾಲನ್ನು ಕತ್ತರಿಸಲಾಗಿತ್ತು.

ವಯಸ್ಸು 84 ಆಗಿದ್ದರೂ ಆರೋಗ್ಯವಾಗಿದ್ದ ಹಿರಿಯ ನಟ ಶಿವರಾಂ ಅವರು ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಅದರಿಂದ ಚೇತರಿಸಿಕೊಳ್ಳಲಾಗದೆ ಡಿಸೆಂಬರ್ 4 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ಏಪ್ರಿಲ್ 17 ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟರು, ಅವರಿಗೆ 59 ವರ್ಷ ವಯಸ್ಸಾಗಿತ್ತು.

ಭಾರತೀಯ ಚಿತ್ರರಂಗದ ಒಂದು ಸಂಸ್ಥೆಯೆಂದು ಗೌರವಿಸಲ್ಪಡುತ್ತಿದ್ದ ಬಾಲಿವುಡ್ ನ ಮೊದಲ ಸೂಪರ್ ಸ್ಟಾರ್ ದಿಲಿಪ್ ಕುಮಾರ್ ಅವರು ಜುಲೈ 7 ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಮರಣಿಸಿದರು. 98 ವರ್ಷದವರಾಗಿದ್ದ ದಿಲಿಪ್ ಸಾಬ್ ಬಹಳ ದಿನಗಳಿಂದ ಅನಾರೋಗಕ್ಕೀಡಾಗಿದ್ದರು. ಅಬರ ಸಾವಿನಿಂದ ಹಿಂದಿ ಸಿನಿಮಾ ರಂಗದ ಒಂದು ಶಕೆ ಕೊನೆಗೊಂಡಿತು.

ಇದನ್ನೂ ಓದಿ:   Viral Video: ಕ್ರಿಸ್​ಮಸ್​ ಆಚರಿಸಿದ್ದೇಕೆಂದು ಗಲಾಟೆ ಮಾಡಿದ ಬಜರಂಗದಳದವರಿಗೆ ಬಿಸಿ ಮುಟ್ಟಿಸಿದ ಮಹಿಳೆ; ವಿಡಿಯೋ ವೈರಲ್

Published on: Dec 31, 2021 09:43 PM