‘ನಾವೆಲ್ಲ ಸಾಯ್ತೀವಿ’: ತಂದೆ-ತಾಯಿಗೆ ಮೆಸೇಜ್ ಕಳಿಸಿದ್ದ ‘ಮಾರ್ಟಿನ್’ ಸಿನಿಮಾ ನಟಿ
‘ನನ್ನ ಇಡೀ ಜೀವನದಲ್ಲಿ ಅಂಥ ಘಟನೆ ನೋಡಿರಲಿಲ್ಲ. 28 ನಿಮಿಷ ನಾವು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆವು. ಆ ಘಟನೆ ಬಗ್ಗೆ ಮತ್ತೆ ಮಾತನಾಡುವುದು ನನಗೆ ಇಷ್ಟ ಇರಲಿಲ್ಲ. ಈಗ ನೀವು ಕೇಳಿದ್ದೀರಿ ಅಂತ ಹೇಳುತ್ತಿದ್ದೇನೆ. ಆ ಅನುಭವನನ್ನು ಹೇಳಲು ಕೂಡ ಸಾಧ್ಯವಿಲ್ಲ. ಆ ಕ್ಷಣದಲ್ಲಿ ನಮಗೆ ಕುಟುಂಬದವರ ನೆನಪು ಆಯಿತು’ ಎಂದು ಎ.ಪಿ. ಅರ್ಜುನ್ ಅವರು ಹೇಳಿದ್ದಾರೆ.
ಶೂಟಿಂಗ್ ಮುಗಿಸಿಕೊಂಡು ವಿಮಾನದಲ್ಲಿ ಬರುತ್ತಿದ್ದ ‘ಮಾರ್ಟಿನ್’ ಸಿನಿಮಾ (Martin Kannada Movie) ತಂಡದವರಿಗೆ ಒಂದು ಕಹಿ ಅನುಭವ ಆಗಿತ್ತು. ಕಾರಣಾಂತರಗಳಿಂದ ವಿಮಾನದ ಹಾರಾಟದಲ್ಲಿ ತೊಂದರೆ ಉಂಟಾಗಿತ್ತು. ಇನ್ನೇನು ಆ ವಿಮಾನ ಅಪಘಾತ ಆಗುತ್ತದೆ ಎಂದು ಇಡೀ ಚಿತ್ರತಂಡದವರು ಭಾವಿಸಿದ್ದರು. ಆ ಕ್ಷಣ ಹೇಗಿತ್ತು ಎಂಬುದನ್ನು ನಿರ್ದೇಶಕ ಎ.ಪಿ. ಅರ್ಜುನ್ (AP Arjun) ಅವರು ವಿವರಿಸಿದ್ದಾರೆ. ‘ನಮ್ಮೆಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಪಕ್ಕದಲ್ಲಿ ಸ್ವಾಮಿ ಕುಳಿತಿದ್ದರು. ಅವರ ಪಕ್ಕದಲ್ಲಿ ಹೀರೋಯಿನ್ ಇದ್ದರು. ಯಾರೂ ಧೈರ್ಯವಾಗಿ ಇರಲಿಲ್ಲ. ಅಷ್ಟುಹೊತ್ತಿಗಾಗಲೇ ಹೀರೋಯಿನ್ ಅವರು ತಂದೆ-ತಾಯಿಗೆ ಮೆಸೇಜ್ ಮಾಡಿದ್ದರು. ನಾವೆಲ್ಲ ಸತ್ತು ಹೋಗುತ್ತಿದ್ದೇವೆ, ನಾವೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಮೆಸೇಜ್ ಮಾಡಿ ಜೋರಾಗಿ ಅಳುತ್ತಿದ್ದರು. ಆ ದೇವರೇ ನಮ್ಮನ್ನು ಕಾಪಾಡಿದ್ದು. ಎಲ್ಲರಿಗೂ ಪುನರ್ ಜನ್ಮ’ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ. ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಚಿತ್ರದ ಶೂಟಿಂಗ್ ಮುಗಿದಿದೆ. ಕುಂಬಳಕಾಯಿ ಒಡೆದ ಬಳಿಕ ಚಿತ್ರತಂಡದವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.