ಆಯುಷ್ ಔಷಧಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸರ್ಕಾರಿ ಅಧಿಕಾರಿ ಕಮಿಷನ್ ಕೇಳುತ್ತಿರುವ ಸ್ಫೋಟಕ ಆಡಿಯೋ ಇಲ್ಲಿದೆ
ಗದಗ ಜಿಲ್ಲಾ ಆಯುಷ್ ಇಲಾಖೆಯ ಔಷಧಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಔಷಧಿ ಖರೀದಿಯಲ್ಲಿ ದೊಡ್ಡ ಪ್ರಮಾಣದ ಕಮಿಷನ್‌ಗೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಟೆಂಡರ್ ಹಾಕಿದ ಕಂಪನಿ ಪ್ರತಿನಿಧಿಯೊಂದಿಗೆ ಜಿಲ್ಲಾ ಆಯುಷ್ ಇಲಾಖೆ ಆಫೀಸರ್ ಡೀಲಿಂಗ್ ಮಾಡಿರುವ ಆಡಿಯೋ ‘ಟಿವಿ9’ಗೆ ಲಭ್ಯವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಆಯುಷ್ ಇಲಾಖೆಯಲ್ಲೂ ಭಾರಿ ಭ್ರಷ್ಟಾಚರ ನಡೆದಿರುವ ಬಗ್ಗೆ ಕಂಪನಿ ಪ್ರತಿನಿಧಿ ಸಂಭಾಷಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.
ಗದಗ, ಡಿಸೆಂಬರ್ 19: ಗದಗ ಜಿಲ್ಲೆಯ ಆಯುಷ್ ಇಲಾಖೆ ಕಚೇರಿಯಲ್ಲಿ 90 ಲಕ್ಷ ರೂಪಾಯಿ ಮೌಲ್ಯದ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಂಬಂಧಿಸಿದ ಆಡಿಯೋ ವೈರಲ್ ಆಗಿದೆ. ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೇಕರ್ ಅವರು ಔಷಧ ವ್ಯಾಪಾರಿ ರಾಜೀವ್ ಅವರಿಂದ ಶೇ 30ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಆಡಿಯೋ ‘ಟಿವಿ9’ ಕನ್ನಡಕ್ಕೆ ಲಭ್ಯವಾಗಿದ್ದು, ಸಂಭಾಷಣೆಯಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟಿರುವುದು ಸ್ಪಷ್ಟವಾಗಿ ಬಯಲಾಗಿದೆ. ಡಾ. ಸಮೋರೇಕರ್ ಅವರು ಕಮಿಷನ್ ಪಡೆಯುವುದನ್ನು ಸಮರ್ಥಿಸಿಕೊಳ್ಳುತ್ತಾ, ಇತರ ಅಧಿಕಾರಿಗಳಿಗೂ ನೀಡಬೇಕು ಎಂದು ಹೇಳಿರುವುದು ಆಡಿಯೋದಲ್ಲಿದೆ.
ವ್ಯಾಪಾರಿ ರಾಜೀವ್ ಅವರು ಈ ಹಿಂದೆ ಕಾರವಾರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಕಮಿಷನ್ ನೀಡಿದ್ದರು ಎಂದು ಹೇಳಿರುವುದೂ ಆಡಿಯೋದಲ್ಲಿದೆ. ಈ ಆರೋಪಗಳು ಬಯಲಾಗುತ್ತಿದ್ದಂತೆ, ಡಾ. ಜಯಪಾಲಸಿಂಗ್ ಸಮೋರೇಕರ್ ಅವರು ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಆಯುಷ್ ಇಲಾಖೆಯ ಔಷಧ ಖರೀದಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿಗೆ ಈ ಘಟನೆ ಪುಷ್ಟಿ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
