ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ
ಚಿತ್ರದುರ್ಗದ ಭೀಮಸಮುದ್ರದಲ್ಲಿ ಗಣಿಗಾರಿಕೆ ಲಾರಿಗಳ ಅತಿಯಾದ ಸಂಚಾರದಿಂದ ಬೆಳೆಗಳಿಗೆ ಹಾನಿಯಾಗಿ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಯಮ ಉಲ್ಲಂಘಿಸಿ ಓಡಾಡುವ ಲಾರಿಗಳು ಧೂಳು ಸೃಷ್ಟಿಸುತ್ತಿದ್ದು, ಜಿಲ್ಲಾಡಳಿತದ ಮೌನದಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ರೈತ ಸಂಘ ಹೋರಾಟಕ್ಕಿಳಿದಿದ್ದಾರೆ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ನಿಧಿಯನ್ನೂ ಬಳಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಚಿತ್ರದುರ್ಗ, ಜನವರಿ 16: ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಸ್ಥಳೀಯ ಜನಜೀವನಕ್ಕೆ ಸಮಸ್ಯೆಯಾಗಿ ಪರಿಣಮಿಸಿವೆ. ಇಲ್ಲಿನ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಗಣಿ ಲಾರಿಗಳು ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿವೆ. ಈ ಲಾರಿಗಳಿಗೆ ಟಾರ್ಪಲ್ ಹೊದಿಸದಿರುವುದು ಮತ್ತು ರಾತ್ರಿ ಮಾತ್ರ ಸಂಚಾರ ಮಾಡಬೇಕೆಂಬ ನಿಯಮವನ್ನು ಪಾಲಿಸದಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ.
ಈ ನಿಯಮಬಾಹಿರ ಸಂಚಾರದಿಂದಾಗಿ ಬೆಳೆದ ಬೆಳೆಗಳು ಹಾಳಾಗುತ್ತಿವೆ. ಭಾರಿ ಗಾತ್ರದ ಲಾರಿಗಳ ಸಂಚಾರದಿಂದ ಸಮೀಪದ ಮನೆಗಳು ಕಂಪಿಸುತ್ತಿವೆ ಹಾಗೂ ಧೂಳಿನಿಂದ ಜನರ ಆರೋಗ್ಯ ಹದಗೆಡುತ್ತಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗಣಿಗಾರಿಕೆ ನಡೆಯುತ್ತಿದ್ದರೂ, ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಿಲ್ಲ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಡಿಎಂಎಫ್ ನಿಧಿಯನ್ನೂ ಸರಿಯಾಗಿ ಬಳಸುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾಡಳಿತದ ಮೌನದಿಂದ ರೋಸಿಹೋಗಿರುವ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿದಿದ್ದಾರೆ.