ಕಾಡಾನೆ ತುಳಿತಕ್ಕೆ ಬಲಿಯಾದ ಕಾರ್ಮಿಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಕೆಎನ್ ರಾಜಣ್ಣ
ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದಲ್ಲಿ ಬಲಿಯಾಗುವ ಪ್ರಕರಣಗಳಲ್ಲಿ ಬಲಿಯಾದ ವ್ಯಕ್ತಿಯ ಕುಟುಂಬ ಭೂರಹಿತವಾಗಿದ್ದರೆ ಅದನ್ನು ವಿಶೇಷ ಪ್ರಕರಣ ಅಂತ ಪರಿಗಣಿಸಿ ಎರಡು ಎಕರೆ ಜಮೀನು ಕಲ್ಪಿಸುವ ವ್ಯವಸ್ಥೆ ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಮತ್ತಾವರದಲ್ಲಿ ಹೇಳಿದರು.
ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದ ಬಳಿ ಮೊನ್ನೆ ಕಾಡಾನೆ ತುಳಿತಕ್ಕೆ ಬಲಿಯಾದ ವಸಂತ್ (Vasanth) ಹೆಸರಿನ ಕಾರ್ಮಿಕಮ ಮನೆಗೆ ಭೇಟಿ ನೀಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಕುಟುಂಬದ ಸದಸ್ಯರನ್ನು ಸಂತೈಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಲ್ಲಿ (Human-wildlife conflict) ಜನ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಗಳು ರೂ. 15 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ ಮತ್ತು ಕುಟುಂಬಕ್ಕೆ ಸರ್ಕಾರ ಬೇರೆ ಸಹಾಯಗಳನ್ನು ಸಹ ಮಾಡುತ್ತಿದೆ ಎಂದು ಸಚಿವ ಹೇಳಿದರು. ಮೃತನ ತಾಯಿಗೆ ಸಿಗುತ್ತಿರುವ ವಿಧವಾ ವೇತನವನ್ನು ರೂ. 600 ರಿಂದ ರೂ. 1,200 ಕ್ಕೆ ಹೆಚ್ಚಿಸಲಾಗುವುದು, ತಿಂಗಳಿಗೆ 35 ಕೇಜಿ ಅಕ್ಕಿ ಸಿಗುವ ಅಂತ್ಯೋದಯ ಕಾರ್ಡ್ ಅನ್ನು ವಸಂತ ಕುಟುಂಬಕ್ಕೆ ವಿತರಿಸಲಾಗುವುದು, ವಸಂತ್ ಪತ್ನಿಗೆ ಪ್ರತಿ ತಿಂಗಳು ರೂ. 4,000 ಮಾಶಾಸನ ಸಿಗುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು 9ನೇ ತರಗತಿವರೆಗೆ ಓದಿರುವ ವಸಂತ್ ಅವರ ಮಗನಿಗೆ ಪಂಚಾಯತ್ ಕಚೇರಿಯಲ್ಲಿ ಅಟೆಂಡರ್ ಹುದ್ದೆ ನೀಡಲಾಗುವುದು ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ