WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
MI vs RCB: 155 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು 67 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ಹಂತದಲ್ಲಿ ಕಣಕ್ಕಿಳಿದ ನಡಿನ್ ಡಿ ಕ್ಲರ್ಕ್ ಭರ್ಜರಿ ಬ್ಯಾಟಿಂಗ್ನೊಂದಿಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಮಾಡಿದ 3 ತಪ್ಪುಗಳು ಆರ್ಸಿಬಿ ಪಾಲಿಗೆ ವರವಾಯಿತು ಎಂದರೆ ತಪ್ಪಾಗಲಾರದು.
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು.
155 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು 67 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ಹಂತದಲ್ಲಿ ಕಣಕ್ಕಿಳಿದ ನಡಿನ್ ಡಿ ಕ್ಲರ್ಕ್ ಭರ್ಜರಿ ಬ್ಯಾಟಿಂಗ್ನೊಂದಿಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಮಾಡಿದ 3 ತಪ್ಪುಗಳು ಆರ್ಸಿಬಿ ಪಾಲಿಗೆ ವರವಾಯಿತು ಎಂದರೆ ತಪ್ಪಾಗಲಾರದು.
ಏಕೆಂದರೆ ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ಮುಂದುವರೆಸಿದ್ದ ನಡಿನ್ ಡಿ ಕ್ಲರ್ಕ್ 19ನೇ ಓವರ್ನ ಮೊದಲ ಎಸೆತದಲ್ಲೇ ಸುಲಭ ಕ್ಯಾಚ್ ನೀಡಿದ್ದರು. ಆದರೆ ಈ ಸುಲಭ ಕ್ಯಾಚ್ ಹಿಡಿಯುವಲ್ಲಿ ನಾಟ್ ಸ್ಕೀವರ್ ಬ್ರಂಟ್ ವಿಫಲರಾಗಿದ್ದರು.
ಇದಾದ ಬಳಿಕ 19ನೇ ಓವರ್ನ 4ನೇ ಎಸೆತದಲ್ಲಿ ನಡಿನ್ ಡಿ ಕ್ಲರ್ಕ್ ಲೆಗ್ ಸೈಡ್ನತ್ತ ಕ್ಯಾಚ್ ನೀಡಿದ್ದರು. ಈ ವೇಳೆ ಬೌಂಡರಿ ಲೈನ್ನಲ್ಲಿದ್ದ ಅಮೆಲಿಯಾ ಕೆರ್ ಕ್ಯಾಚ್ ಕೈ ಚೆಲ್ಲಿದ್ದರು.
ಅತ್ತ ಕ್ಯಾಚ್ ಡ್ರಾಪ್ ಆದ ಬೆನ್ನಲ್ಲೇ ಅಮನ್ಜೋತ್ ಕೌರ್ ಚೆಂಡನ್ನು ವಿಕೆಟ್ ಕೀಪರ್ ಕಮಲಿನಿಯತ್ತ ಎಸೆದರು. ಆದರೆ ಚೆಂಡು ಸರಿಯಾಗಿ ಹಿಡಿಯುವಲ್ಲಿ ವಿಫಲರಾದ ಕಮಲಿನಿ ಸುಲಭ ರನೌಟ್ ಅವಕಾಶವನ್ನು ಕೈ ತಪ್ಪಿಸಿಕೊಂಡರು.
ಹೀಗೆ ಒಂದೇ ಓವರ್ನಲ್ಲಿ ಮೂರು ಜೀವದಾನ ಪಡೆದ ನಡಿನ್ ಡಿ ಕ್ಲರ್ಕ್ ಕೊನೆಯ ಓವರ್ನಲ್ಲಿ 6,4,6,4 ಬಾರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಇತ್ತ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸತತ ಮೂರು ತಪ್ಪುಗಳನ್ನು ಮಾಡುತ್ತಾ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಎಸೆತದಲ್ಲಿ ಸೋಲೊಪ್ಪಿಕೊಂಡಿತು.

