ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ಶಾಸಕ ಜಿಟಿ ದೇವೇಗೌಡ, ರಾಜ್ಯಾಧ್ಯಕ್ಷರ ಆಯ್ಕೆಗೆ ಭಾನುವಾರ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಪರೋಕ್ಷವಾಗಿ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನದ ಮಾತುಗಳನ್ನು ಆಡಿದ್ದಾರೆ. ಜಿಟಿ ದೇವೇಗೌಡ ಮಾತಿನ ವಿಡಿಯೋ ಇಲ್ಲಿದೆ.
ಮೈಸೂರು, ಜನವರಿ 11: ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಗೆ ಭಾನುವಾರ ಸಭೆ ಕರೆದಿರುವ ವಿಚಾರವಾಗಿ ಪಕ್ಷದ ಶಾಸಕ ಜಿಟಿ ದೇವೇಗೌಡ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದು, ನಾಳೆಯ ಸಭೆಯಲ್ಲಿ ನಾನು ಭಾಗಿಯಾಗಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರ ಕೂಡ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ನಾನು ಹೋಗಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣದಿಂದ ನಾನು ಹೋಗಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ನನಗೆ ಮನೆಯ ಜವಾಬ್ದಾರಿ ಸ್ವಲ್ಪ ಜಾಸ್ತಿಯಾಗಿದೆ. ಮತ್ತೆ ಕ್ಷೇತ್ರ ನೀವೇ ನೋಡಿದ್ದೀರಿ, 900 ಬಡಾವಣೆಗಳು ಹಸ್ತಾಂತರ ಮಾಡಿದ್ದಾರೆ. ಸುಮಾರು 10 ವರ್ಷ 15 ವರ್ಷದಿಂದ ಮುಡಾನೂ ಅಭಿವೃದ್ಧಿ ಮಾಡಿಲ್ಲ. ನಗರಪಾಲಿಕೆಯೂ ಅಭಿವೃದ್ಧಿಯಾಗಬೇಕಿದೆ. ಶುಕ್ರವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದ್ದೇವೆ. ಈ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ