ಮಾಜಿ ಸಿಎಂ ಬೊಮ್ಮಾಯಿ ತವರಿನಲ್ಲಿ ಚಮತ್ಕಾರ! ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟ ಅತ್ತೆ, ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟರು!

| Updated By: ಆಯೇಷಾ ಬಾನು

Updated on: Aug 27, 2024 | 2:01 PM

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ನೂರಾರು ಮಹಿಳೆಯರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ. ಕೆಲ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಗೂ ಗ್ರಹಣ ವಿಡಿದಿತ್ತು. ಆದ್ರೀಗ ಸರ್ಕಾರ ಮತ್ತೆ ಗೃಹಲಕ್ಷ್ಮೀಯರ ಖಾತೆಗೆ ಹಣ ಹಾಕಿದೆ. ಇದರಿಂದ ಮಹಿಳೆಯರು ಖುಷಿ ಆಗಿದ್ದು ಇದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಅಜ್ಜಿಯೊಬ್ಬರು ತಾವು ಕೂಡಿಟ್ಟ ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿ ಊರ ಜನರ ಮನಸ್ಸುಗೆದ್ದಿದ್ದರು. ಇದೀಗ ಗೃಹ ಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಸ್ಟೋರ್ ಹಾಕಿಸಿ‌ಕೊಟ್ಟಿದ್ದಾರೆ.

ಹಾವೇರಿ, ಆಗಸ್ಟ್​.27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಹೆಣ್ಣುಮಕ್ಕಳಿಗಾಗಿ ತನ್ನ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತಂದಾಗ ವಿರೋಧಿಗಳು ಅದರ ಬಗ್ಗೆ ಅಪಸ್ವರ ಎತ್ತಿದ್ದರು, ಕೊಂಕು ತೆಗೆದಿದ್ದರು. ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಗೃಹಲಕ್ಷ್ಮಿ ಹಣ ಯಾರಿಗೆ ಸಂದಾಯವಾಗುತ್ತದೆ ಎಂದು ಮಿಲಿಯನ್ ಡಾಲರ್​ ಪ್ರಶ್ನೆಯನ್ನು ಎತ್ತಿದ್ದರು. 2 ಸಾವಿರ ರೂ ಗೃಹಲಕ್ಷ್ಮಿ ಹಣದಿಂದ ಅತ್ತೆ-ಸೊಸೆ ಜುಟ್ಟಿಗೆ ಜುಟ್ಟು ಹಿಡಿದುಕೊಂಡು ಕಾದಾಡುತ್ತಾರೆ ಎಂದೆಲ್ಲಾ ವಿರೋಧಿಗಳು ಗುಲ್ಲೆಬ್ಬಿಸಿದ್ದರು. ಆದರೆ ಈಗ ಅದಕ್ಕೆಲ್ಲಾ ಸಮಂಜಸ ಉತ್ತರ ಕೊಡುವಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಶಿಗ್ಗಾವಿಯ ಅತ್ತೆ-ಸೊಸೆ ಜೋಡಿ ಮಾದರಿಯಾಗಿ ನಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ ಹಣದಲ್ಲಿ ಒಂದು ಪೈಸೆಯನ್ನೂ ಪೋಲು ಮಾಡದೆ ಸಾಕ್ಷಾತ್​ ಅತ್ತೆಯೇ ಕಳೆದ 10 ತಿಂಗಳಿಂದ ಅಷ್ಟನ್ನೂ ಕೂಡಿಟ್ಟು, 20 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ಸೊಸೆಯ ಕೈಗೆ ಕೊಟ್ಟಿದ್ದಾರೆ. ತಾಯಿ ನೀನೇ ನಮ್ಮ ಮನೆಯ ಗೃಹಲಕ್ಷ್ಮಿ! ನಮಗೆ ಊರುಗೋಲು ಆಗಲು ನಾಡಿನ ದೊರೆ ಸಿದ್ದರಾಮಣ್ಣ ಕೊಟ್ಟಿರುವ ದುಡ್ಡು ಇದೆ. ಅದನ್ನು ಹೊಂದಿಸಿಕೊಂಡು ಒಂದು ವ್ಯಾಪಾರ ಶುರು ಮಾಡು ಎಂದು ತುಂಬು ಹೃದಯದಿಂದ ಹಾರೈಸಿ, ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳುತ್ತಾ ಸೊಸೆಯ ಕೈಗೆ ಅಷ್ಟೂ ದುಡ್ಡನ್ನು ‘ಹಸ್ತಾಂತರ’ ಮಾಡಿದ್ದಾರೆ. ಮುಂದೇನಾಯ್ತು… ಈ ಇಂಟರೆಸ್ಟಿಂಗ್​​ ಸ್ಟೋರಿ ಓದಿಕೊಳ್ಳಿ.

ಹಿಂದಿನಿಂದಲೂ ಅತ್ತೆ-ಸೊಸೆ ಎಂದರೆ ಕೇವಲ ಬೈಗುಳ, ಒಬ್ಬರನೊಬ್ಬರು ಕಂಡ್ರೆ ಆಗಲ್ಲ, ಕಿತ್ತಾಟ, ಮನೆ ಕೆಲಸ ಮಾಡಲ್ಲ ಎಂಬ ದೂರು ಕೊಡುವ ಅತ್ತೆ ಎಂಬ ಮಾತೇ ಹೆಚ್ಚು ಕೇಳಿ ಬರುತ್ತಿತ್ತಿ. ಇದೀಗ ಗೃಹಲಕ್ಷ್ಮೀ ಯೋಜನೆ ಅತ್ತೆ-ಸೊಸೆ ಇಬ್ಬರನ್ನೂ ಒಂದು ಮಾಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಸ್ವಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ನೀರಲಗಿ ಗ್ರಾಮದಲ್ಲಿ ಸೊಸೆ ಹೊರಗೆ ಕೆಲಸಕ್ಕೆ ಹೋಗಿ ಕಷ್ಟ ಪಡೋದೇಕೆ ಎಂದು ದೊಡ್ಡ ಮನಸ್ಸು ಮಾಡಿದ ಅತ್ತೆ ತಾವು ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣದಲ್ಲೇ ಮನೆಯಲ್ಲಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟು ಆದರ್ಶ ಅತ್ತೆಯಾಗಿದ್ದಾರೆ.

ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದರು. 10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್​ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಅತ್ತೆ ಕಾರ್ಯಕ್ಕೆ ನೀರಲಗಿ ಗ್ರಾಮಸ್ಥರು ಭೇಷ್ ಎಂದಿದ್ದಾರೆ. ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್ ಗೆ ಪೂಜೆ ಮಾಡಿ ಚಾಲನೆ ನೀಡಲಾಗಿದೆ. ಅತ್ತೆ-ಸೊಸೆ ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on