ತಪ್ಪು ಮಾಡಿದವರ ಬೆಂಬಲಕ್ಕೆ ನಿಲ್ಲುವ ಮನಸ್ಥಿತಿಯನ್ನು ಮುಸ್ಲಿಮರು ಬದಲಾಯಿಸಿಕೊಳ್ಳಬೇಕು: ಪೇಜಾವರ ಸ್ವಾಮೀಜಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2022 | 4:00 PM

ತಪ್ಪು ಮಾಡಿದರನ್ನು ಮುಸ್ಲಿಂ ಸಮಾಜ ಕಾನೂನಿನ ಎದುರು ಎಳೆದು ತಂದರೆ ಮತ್ತು ಅವರು ಮಾಡಿದ್ದು ತಪ್ಪು ಅಂತ ಘೋಷಿಸಿ ತಪ್ಪಿತಸ್ಥರ ವಿರುದ್ಧ ಪ್ರತಿಭಟಿಸಿದರೆ, ಅದು ಸಾಮರಸ್ಯಕ್ಕೆ ನಾಂದಿ ಹಾಡುತ್ತದೆ. ಅಂಥ ಮನಸ್ಥಿತಿಯನ್ನು ಅವರು ಬೆಳಸಿಕೊಳ್ಳಬೇಕಿದೆ

ಉಡುಪಿ: ಹಿಂದೂ ದೇವಾಲಯಗಳಲ್ಲಿ ಮತ್ತು ಹಿಂದೂ ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಮುಸಲ್ಮಾನ ಸಮುದಾಯದ (Muslim community) ವ್ಯಾಪಾರಿಗಳನ್ನು ನಿಷೇಧಿಸುವ ಕೆಲಸ ಜಾರಿಯಲ್ಲಿರುವ ಹಾಗೆಯೇ ಉಡುಪಿಯಲ್ಲಿ ಈ ಸಮುದಾಯದ ಮುಖಂಡರು ಬುಧವಾರದಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Theertha Swamiji) ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಮಾತುಕತೆ ನಡೆಸಿ ಅವರ ದೂರು ದುಮ್ಮಾನಗಳನ್ನು ಆಲಿಸಿದ ಬಳಿಕ ಸ್ವಾಮೀಜಿಗಳು ಮಾಧ್ಯಮದವರೊಂದಿಗೆ ಮಾತಾಡಿದರು. ಪೇಜಾವರ ಶ್ರೀಗಳು ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಜನರ ಮನೋಭಾವ ಮತ್ತು ಧೋರಣೆಗಳ ಬಗ್ಗೆ ಮಾತಾಡಿದರು. ಸಮುದಾಯದ ಜನರೆಲ್ಲ ಒಂದೇ ರೀತಿ ಅಂತ ಹೇಳಲಾಗದು ಎಂದು ಮಾತಾಡಿದ ಶ್ರೀಗಳು, ತಪ್ಪು ಮತ್ತು ಅಪರಾಧ ಎಸಗುವ ಕೆಲ ಜನರ ಕೃತ್ಯಗಳು ಖಂಡಿಸದೆ (condemn) ಅವರ ಪರವಾಗಿ ನಿಂತುಕೊಳ್ಳುವುದು, ಅವರ ಪರ ವಾದ ಮಾಡುವುದು ತಪ್ಪು ಮತ್ತು ಈ ತಪ್ಪು ಮಾಡುವುದನ್ನು ಅವರು ನಿಲ್ಲಿಸಬೇಕು ಎಂದು ಶ್ರೀಗಳು ಹೇಳಿದರು.

ಕೆಲವು ಜನ ಮಾತ್ರ ತಪ್ಪು ಮಾಡುತ್ತಾರೆ, ಉಳಿದವರು ಅವರಿಗೆ ಬೆಂಬಲ ನೀಡುವ ಬದಲು ಖಂಡಿಸಬೇಕು. ಅವರನ್ನು ಖಂಡಿಸದೆ ಹೋದರೆ ಅಪವಾದ ಮತ್ತು ಅಪಕೀರ್ತಿ ಪೂರ್ತಿ ಸಮುದಾಯದ ಮೇಲೆ ಬರುತ್ತದೆ ಮತ್ತು ಹಾಗೂ ಅಂಥ ಸ್ಥಿತಿಗೆ ಸಮುದಾಯವೇ ಹೊಣೆಯಾಗಬೇಕಾಗುತ್ತದೆ, ಅಂತ ಪೇಜಾವರ ಶ್ರೀಗಳು ಹೇಳಿದರು.

ತಪ್ಪು ಮಾಡಿದರನ್ನು ಮುಸ್ಲಿಂ ಸಮಾಜ ಕಾನೂನಿನ ಎದುರು ಎಳೆದು ತಂದರೆ ಮತ್ತು ಅವರು ಮಾಡಿದ್ದು ತಪ್ಪು ಅಂತ ಘೋಷಿಸಿ ತಪ್ಪಿತಸ್ಥರ ವಿರುದ್ಧ ಪ್ರತಿಭಟಿಸಿದರೆ, ಅದು ಸಾಮರಸ್ಯಕ್ಕೆ ನಾಂದಿ ಹಾಡುತ್ತದೆ. ಅಂಥ ಮನಸ್ಥಿತಿಯನ್ನು ಅವರು ಬೆಳಸಿಕೊಳ್ಳಬೇಕಿದೆ, ಆಗಲೇ ಈಗ ತಲೆದೋರಿರುವ ಸಮಸ್ಯೆಗಳೆಲ್ಲ ಇಲ್ಲವಾಗುತ್ತವೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಮಾಧ್ಯಮದವರಿಗೆ ಉಡುಪಿಯಲ್ಲಿ ಹೇಳಿದರು.

ಇದನ್ನೂ ಓದಿ:  ಉಡುಪಿ: ಮುಸಲ್ಮಾನ ವರ್ತಕರು, ಕ್ರೈಸ್ತ ಧರ್ಮಗುರುಗಳಿಂದ ಪೇಜಾವರಶ್ರೀ ಭೇಟಿ; ಶಾಂತಿ, ಸಹಬಾಳ್ವೆ ಸಂಬಂಧ ಮಾತುಕತೆ