ಪುನೀತ್ ಅವರೊಂದಿಗೆ ನಟಿಸುವ ಮಹದಾಸೆ ಈಡೇರಲೇಯಿಲ್ಲ, ನನ್ನ ನಿರ್ಮಾಣದ ಸಿನಿಮಾನಲ್ಲಿ ನಟಿಸಲು ಒಪ್ಪಿದ್ದರು: ರಾಧಿಕಾ ಕುಮಾಸ್ವಾಮಿ

ಪುನೀತ್ ಅವರೊಂದಿಗೆ ನಟಿಸುವ ಮಹದಾಸೆ ಈಡೇರಲೇಯಿಲ್ಲ, ನನ್ನ ನಿರ್ಮಾಣದ ಸಿನಿಮಾನಲ್ಲಿ ನಟಿಸಲು ಒಪ್ಪಿದ್ದರು: ರಾಧಿಕಾ ಕುಮಾಸ್ವಾಮಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2021 | 4:06 PM

ಪುನೀತ್​​ರೊಂದಿಗೆ ಸಿನಿಮಾನಲ್ಲಿ ಕೆಲಸ ಸಾಧ್ಯವಾಗದೆ ಹೋದರೂ ಪುನೀತ್ ರೊಂದಿಗೆ ಏಕಕಾಲಕ್ಕೆ ಸಿನಿಮಾರಂಗ ಪ್ರವೇಶಿಸಿದ್ದಾಗಿ ಹೇಳಿದ ರಾಧಿಕಾ, ಹಲವಾರು ಶೋಗಳಲ್ಲಿ ಜೊತೆಯಾಗಿ ಕೆಲಸ ಮತ್ತು ಡ್ಯಾನ್ಸ್ ಮಾಡಿದ್ದನ್ನು ನೆನಪಿಸಿಕೊಂಡರು.

ಬೇರೆಯವರಿಗೆ ಮಾದರಿಯಾಗುವ ಹಾಗೆ ಬದುಕು ನಡೆಸಿ ಚಿಕ್ಕ ವಯಸ್ಸಿಗೆ ಬಾಳಿನ ಪಯಣ ಕೊನೆಗಾಣಿಸಿದ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಅನೇಕ ಗಣ್ಯರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಂಠೀರವ ಸ್ಟೇಡಿಯಂಗೆ ಬರುತ್ತಲೇ ಇದ್ದಾರೆ. ಶನಿವಾರ ಬೆಳಗ್ಗೆ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿನಿಮಾ ನಟ-ನಟಿಯರ ಪೈಕಿ ನಟಿ-ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಸಹ ಒಬ್ಬರು. ರಾಧಿಕಾ ಈಗ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿರುವರಾದರೂ, ಸಿನಿಮಾ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪುಗೆ ನಮನ ಸಲ್ಲಿಸಿದ ನಂತರ ಟಿವಿ9 ವರದಿಗಾರನೊಂದಿಗೆ ಮಾತಾಡಿದ ರಾಧಿಕಾ, ತಮ್ಮ ಪ್ರೊಡಕ್ಷನ್ ಚಿತ್ರದಲ್ಲಿ ಅವರು ನಟಿಸಲು ಒಪ್ಪಿದ ಸಂಗತಿಯನ್ನು ಸಹ ಹೇಳಿದರು.

ಕೇವಲ 4 ದಿನಗಳ ಹಿಂದೆ ರಾಧಿಕಾ ಅವರು ಪುನೀತ್ ಅವರಿಗೆ ಫೋನ್ ಮಾಡಿ ತಮ್ಮ ಸಿನಿಮಾನಲ್ಲಿ ನಟಿಸಬೇಕೆಂದು ಹೇಳಿದಾಗ ಪುನೀತ್ ಒಪ್ಪಿಕೊಂಡಿದ್ದರಂತೆ. ಅವರೊಂದಿಗೆ ನಟಿಸಲು ತನಗೆ ಬಹಳ ಆಸೆಯಿತ್ತು ಆದರೆ ಅದು ಕೈಗೂಡಲೇ ಇಲ್ಲ ಎಂದು ರಾಧಿಕಾ ವೇದನೆ ಮತ್ತು ವಿಷಾದದಿಂದ ಹೇಳಿದರು.

ಅವರೊಂದಿಗೆ ಸಿನಿಮಾನಲ್ಲಿ ಕೆಲಸ ಸಾಧ್ಯವಾಗದೆ ಹೋದರೂ ಪುನೀತ್ ರೊಂದಿಗೆ ಏಕಕಾಲಕ್ಕೆ ಸಿನಿಮಾರಂಗ ಪ್ರವೇಶಿಸಿದ್ದಾಗಿ ಹೇಳಿದ ಅವರು, ಹಲವಾರು ಶೋಗಳಲ್ಲಿ ಜೊತೆಯಾಗಿ ಕೆಲಸ ಮತ್ತು ಡ್ಯಾನ್ಸ್ ಮಾಡಿದ್ದನ್ನು ನೆನಪಿಸಿಕೊಂಡರು. ಶಿವರಾಜಕುಮಾರ ಜೊತೆ ‘ತವರಿಗೆ ಬಾ ತಂಗಿ ಬಾ’ ಚಿತ್ರದಲ್ಲಿ ಶಿವಣ್ಣನ ತಂಗಿಯಾಗಿ ನಟಿಸಿದ ಮೇಲೆ ತಾನು ಡಾ ರಾಜ್ ಕುಮಾರ್ ಕುಟುಂಬದ ಒಬ್ಬ ಸದಸ್ಯಳಾಗಿಬಿಟ್ಟಿದ್ದೆ ಅಂತ ಅವರು ಹೇಳಿದರು.

ಎದುರು ಸಿಕ್ಕಾಗಲೆಲ್ಲ ತಾನೊಬ್ಬ ಸ್ಟಾರ್ ಅನ್ನುವ ಅಹಂ ಇಲ್ಲದೆ ತಮ್ಮೊಂದಿಗೆ ಬೆರೆಯುತ್ತಿದ್ದರು, ಆತ್ಮೀಯತೆಯಿಂದ ಮಾತಾಡುತ್ತಿದ್ದರು. ಬಹಳ ಸರಳ, ವಿನಮ್ರ ಸ್ಬಭಾವದ ವ್ಯಕ್ತಿ ಅವರಾಗಿದ್ದರು. ತಮ್ಮ ಸಿನಿಮಾದಲ್ಲಿ ಪುನೀತ್ ನಟಿಸುವುದು ಸಾಧ್ಯವಾಗದೆ ಹೋದರೂ ಹೃದಯದಲ್ಲಿ ಶಾಶ್ವತವಾಗಿ ಉಳಿದಿರುತ್ತಾರೆ, ಎಂದು ರಾಧಿಕಾ ಹೇಳಿದರು.

ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಪೊಲೀಸ್ ಸಿಬ್ಬಂದಿ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ ಮತ್ತು ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿದ್ದರೂ ಸಂಯಮದಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:  ಅಪ್ಪುದು ಸಡನ್ ಡೆತ್ -ಈ ಹಿಂದೆ ಯಾವುದೇ ಸಮಸ್ಯೆ ಇರಲಿಲ್ಲ: ಕೊನೆಯ ಕ್ಷಣ ವಿವರಿಸಿದ ಡಾ. ರಮಣ, ವಿಡಿಯೋ ನೋಡಿ