ಕತಾರ್ ದೇಶಕ್ಕೆ ನನ್ನ ಭೇಟಿ ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

|

Updated on: Feb 15, 2024 | 8:01 PM

ಕತಾರ್ ಪ್ರಧಾನ ಮಂತ್ರಿಯವರೊಂದಿಗೆ ಮೋದಿಯವರು ನಡೆಸಿದ ಚರ್ಚೆ ಫಲಪ್ರದವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ವ್ಯಾಪಾರ, ಹೂಡಿಕೆ, ಇಂಧನ ಹಣಕಾಸು ಮೊದಲಾದವು ಸೇರದಂತೆ ಇನ್ನೂ ಕೆಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ಮಾತುಕತೆಗಳು ನಡೆದವು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಬಾತ್ಮೀದಾರ ರಂಧೀರ್ ಜೈಸ್ವಾಲ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದೋಹಾದಲ್ಲಿ ಮಾತುಕತೆ ನಡೆಸಿದರು. ಎರಡು ರಾಷ್ಟ್ರಗಳ ಮುಖಂಡರು ದ್ವಿಪಕ್ಷೀಯ ಮಾತುಕತೆಗಳ ಜೊತೆ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಚರ್ಚಿಸಿದರು. ಬುಧವಾರದಂದು ಇದೇ ದೋಹಾದಲ್ಲಿ ಪ್ರಧಾನಿ ಮೋದಿ ಅವರು ಕತಾರ್ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲರಹಮಾನ್ ಅವರನ್ನು ಭೇಟಿ ಮಾಡಿ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಬಲಪಡಿಸುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ನಲ್ಲಿ ಪ್ರಧಾನಿ ಮೋದಿಯವರು, ತಮ್ಮ ಮಾತುಕತೆ ಕತಾರ್-ಭಾರತ ನಡುವಿನ ಸ್ನೇಹವನ್ನು ಬಲಪಡಿಸುವ ಅಂಶದ ಮೇಲೆ ಕೇಂದ್ರೀಕೃತವಾಗಿತ್ತು ಅಂತ ಹೇಳಿದ್ದಾರೆ. ಕತಾರ್ ಪ್ರಧಾನ ಮಂತ್ರಿಯವರೊಂದಿಗೆ ಮೋದಿಯವರು ನಡೆಸಿದ ಚರ್ಚೆ ಫಲಪ್ರದವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ವ್ಯಾಪಾರ, ಹೂಡಿಕೆ, ಇಂಧನ ಹಣಕಾಸು ಮೊದಲಾದವು ಸೇರಿದಂತೆ ಇನ್ನೂ ಕೆಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ಮಾತುಕತೆಗಳು ನಡೆದವು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಬಾತ್ಮೀದಾರ ರಂಧೀರ್ ಜೈಸ್ವಾಲ್ ಹೇಳಿದ್ದಾರೆ.

ಕತಾರ್ ಭೇಟಿಯನ್ನು ಪ್ರಧಾನಿ ಮೋದಿ ತಮ್ಮ X ಹ್ಯಾಂಡಲ್ ನಲ್ಲಿ ಹೀಗೆ ಹೇಳಿಕೊಂಡಿದ್ದಾರೆ.

‘ಕತಾರ್ ಗೆ ನನ್ನ ಭೇಟಿ ಭಾರತ-ಕತಾರ್ ನಡುವಿನ ಬಾಂಧವ್ಯಕ್ಕೆ ಒಂದು ಹೊಸ ಶಕ್ತಿ ನೀಡಿದೆ. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಸಂಸ್ಕೃತಿ ಮೊದಲಾದ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಉನ್ನತಮಟ್ಟದ ಸಹಕಾರ ಸ್ಥಾಪಿಸುವ ಕಡೆ ಭಾರತ ಎದುರು ನೋಡುತ್ತಿದೆ. ನನಗೆ ದೊರೆತ ಆದರಾತಿಥ್ಯಗಳಿಗೆ ಕತಾರ್ ಸರ್ಕಾರ ಮತ್ತು ಅಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ’, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯುಎಈ ಭೇಟಿಯ ಬಳಿಕ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ನಿನ್ನೆ ಸಾಯಂಕಾಲ ದೋಹಾಗೆ ಆಗಮಿಸಿದರು. ಅವರ ಗೌರವಾರ್ಥ ಕತಾರ್ ಪ್ರಧಾನ ಮಂತ್ರಿ ಕಳೆದ ರಾತ್ರಿ ಔತಣ ಕೂಟವೊಂದನ್ನು ಏರ್ಪಡಿಸಿದ್ದರು.

ದೋಹಾಗೆ ಆಗಮಿಸಿದ ನಂತರ ಪೋಸ್ಟೊಂದನ್ನು ಮಾಡಿದ ಪ್ರಧಾನಿ ಮೋದಿ ಎರಡು ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸುವ ಫಲಪ್ರದ ಮಾತುಕತೆಗಳಿಗೆ ಎದುರು ನೀಡುತ್ತಿರುವುದಾಗಿ ಹೇಳಿದ್ದರು. ತಮಗೆ ಭಾರೀ ಸ್ವಾಗತ ನೀಡಿ ಸತ್ಕರಿಸಿದ ಭಾರತೀಯ ಸಂಜಾತರಿಗೆ ಅವರು ಧನ್ಯವಾದ ಸಲ್ಲಿಸಿದರು.

ಯುಎಈಯ ಎರಡು-ದಿನ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯರನ್ನು ಮತ್ತು ಸರ್ಕಾರಗಳ ಪ್ರತಿಷ್ಠಿತ ಶೃಂಗಸಭೆಯನ್ನು ಉದ್ದೇಶಿಸಿ ಮಾತಾಡಿದರಲ್ಲದೆ ಯುಎಈಯಲ್ಲಿ ನಿರ್ಮಿಸಲಾಗಿರುವ ಪ್ರಥಮ ಹಿಂದೂ ದೇವಸ್ಥಾನವನ್ನು ಉದ್ಘಾಟಿಸಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Thu, 15 February 24

Follow us on