ಮೈಸೂರು ದಸರಾ 2026: ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್ ನೋಡಿ!
ಮೈಸೂರು ದಸರಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗ ಮೊದಲ ಬಾರಿಗೆ ರದ್ದಾಗಿದೆ. ಈ ಬಗ್ಗೆ ಮೈಸೂರಿನ ಜಟ್ಟಿ ಮಹೇಶ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಪ್ರವೇಶ ಸಿಗದಿರುವುದು, ಸರಿಯಾದ ಸಮನ್ವಯದ ಕೊರತೆ ಮತ್ತು ಶುಭ ಮುಹೂರ್ತ ತಪ್ಪಿದ ಕಾರಣ ಕಾಳಗ ರದ್ದಾಗಿದ್ದು, ತಿಂಗಳುಗಟ್ಟಲೆ ಮಾಡಿದ ತಾಲೀಮು ವ್ಯರ್ಥವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು, ಅಕ್ಟೋಬರ್ 21: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗ, ಹಲವು ಗೊಂದಲಗಳ ನಂತರ ಈ ಸಲ ಮೊದಲ ಬಾರಿಗೆ ರದ್ದಾಗಿದೆ. ನಾಲ್ಕು ಜನ ಜಟ್ಟಿಗಳು ರಾಜವಂಶಸ್ಥರಾದ ಯದುವೀರರ ಸಮ್ಮುಖದಲ್ಲಿ ಕಾಳಗ ನಡೆಸಲು ಸಿದ್ಧರಾಗಿದ್ದರೂ, ಸಮಯದ ಅಭಾವ ಮತ್ತು ವಿಳಂಬದಿಂದಾಗಿ ಈ ಸಂಪ್ರದಾಯ ಸ್ಥಗಿತಗೊಂಡಿದೆ.
ಈ ಬಗ್ಗೆ ಮೈಸೂರಿನ ಜಟ್ಟಿ ಮಹೇಶ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಾಳಗಕ್ಕೆ ಮುನ್ನ ಜಟ್ಟಿಗಳು ಮತ್ತು ಅವರ ಸಹಾಯಕರಿಗೆ ಅರಮನೆ ಆವರಣ ಪ್ರವೇಶಿಸಲು ಸಕಾಲದಲ್ಲಿ ಅನುಮತಿ ದೊರೆಯಲಿಲ್ಲ. ಬೆಳಗ್ಗೆ 8:30 ರಿಂದ 9 ಗಂಟೆಯ ಶುಭ ಮುಹೂರ್ತವಿದ್ದರೂ, ಪೊಲೀಸರು ಮತ್ತು ಅರಮನೆ ಆಡಳಿತದ ಸಮನ್ವಯ ಕೊರತೆಯಿಂದಾಗಿ 9 ಗಂಟೆಯ ನಂತರವಷ್ಟೇ ಜಟ್ಟಿಗಳಿಗೆ ಪ್ರವೇಶ ಸಿಕ್ಕಿತು. ಅಲ್ಲಿಯವರೆಗೆ ಕಾಳಗದ ಸಿದ್ಧತೆಗೆ ಬೇಕಾದ ಆಯುಧ ಕಟ್ಟುವಿಕೆ, ಮುಸ್ತಿಫ್ ಮಾಡುವಿಕೆಗಳಾಗಲಿಲ್ಲ. ತರಬೇತಿ ಪಡೆದಿದ್ದ ಜಟ್ಟಿಗಳ ಆರು ತಿಂಗಳ ಶ್ರಮ ವ್ಯರ್ಥವಾಯಿತು ಎಂದು ಮಹೇಶ್ ಜಟ್ಟಿ ಅಳಲು ತೋಡಿಕೊಂಡಿದ್ದಾರೆ. ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತದೆ, ಆದರೆ ಈ ಬಾರಿ ಮುಹೂರ್ತ ಬೇಗ ಇದ್ದುದರಿಂದ ಕಾಳಗವೇ ರದ್ದಾಯಿತು ಎಂದು ಅವರು ತಿಳಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
